ರೌಡಿಶೀಟರ್‌ನಿಂದ ಲಂಚ: ಪೊಲೀಸ್ ಪೇದೆ ಎಸಿಬಿ ಬಲೆಗೆ
ಬೆಂಗಳೂರು, ಜು.15: ರೌಡಿಶೀಟರ್‌ನಿಂದ ಲಂಚ ಪಡೆದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ಬಾಗಲಗುಂಟೆ ಪೊಲೀಸ್ ಠಾಣೆಯ ಪೇದೆ ಎಚ್.ಸಿ.ಮಂಜುನಾಥ್ (7878) ವಿರುದ್ಧ ಲಂಚ ಸ್ವೀಕಾರ ಆರೋಪದ ಮೇಲೆ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಪ್ರಕರಣದ ವಿವರ: ಇಲ್ಲಿನ ಖಾತಾನಗರದ ನಿವಾಸಿಯೊಬ್ಬರ ಸ್ನೇಹಿತನ ವಿರುದ್ಧ ಕ್ರೈಂ.ನಂ.238/17 ಕಲಂ 427 ಐಪಿಸಿ ಮತ್ತು 2ಎ ಪಿಡಿಎಪಿ ಕಾಯ್ದೆ ಅಡಿಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಆದರೆ, ಆರೋಪಿ ಪೇದೆ ಎಚ್.ಸಿ.ಮಂಜುನಾಥ, ಪ್ರಕರಣವನ್ನು ಖುಲಾಸೆ ಮಾಡಿಸುವುದಾಗಿ ಹೇಳಿ 10 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿರುವ ಆರೋಪದ ಮೇಲೆ ಎಸಿಬಿ ದೂರು ನೀಡಲಾಗಿತ್ತು.
ಶನಿವಾರ ಪೇದೆ ಮಂಜುನಾಥ್ 10 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಈ ಸಂಬಂಧ ಆರೋಪಿ ವಿರುದ್ಧ ಎಸಿಬಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.





