ಪಡೀಲ್ ಬಳಿ ಟ್ರಾಫಿಕ್ ಸಮಸ್ಯೆ; ನಿತ್ಯ ರಸ್ತೆ ತಡೆ
ಮಂಗಳೂರು, ಜು.15: ನಗರವನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 73ರ ಪಡೀಲ್ ಬಳಿ ಕಳೆದ ಕೆಲವು ದಿನಗಳಿಂದ ಕಿಕ್ಕಿರಿದ ವಾಹನಗಳಿಂದ ಪ್ರಯಾಣಿಕರು, ವಾಹನ ಚಾಲಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಹಲವು ತಾಸು ರಸ್ತೆ ತಡೆಯಾಗುತ್ತಿದೆ. ಆದರೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸದೆ ಮೌನವಹಿಸಿದ್ದಾರೆ ಎನ್ನುವುದು ಸ್ಥಳೀಯ ಪ್ರಯಾಣಿಕರ ಆರೋಪ.
‘‘ಪಡೀಲ್ ಪರಿಸರದಲ್ಲಿ ನಿರಂತರವಾಗಿ ಏಕೆ ರಸ್ತೆ ತಡೆ ಉಂಟಾಗುತ್ತಿದೆ ಎಂದು ಕೇಳಿದರೆ ಅಲ್ಲಿ ರಸ್ತೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತದೆ ಎಂದು ಕೆಲವು ಅಧಿಕಾರಿಗಳು ಉತ್ತರ ನೀಡುತ್ತಾರೆ. ಆದರೆ ನಿಜವಾದ ಸಮಸ್ಯೆ ಅದಲ್ಲ. ಪಡೀಲ್‌ನಿಂದ ಮಂಗಳೂರಿಗೆ ಸಂಪರ್ಕಿಸುವ ಈ ಪ್ರದೇಶದಲ್ಲಿ ರಸ್ತೆಯಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿ ಉಂಟಾಗಿರುವ ಬೃಹತ್ ಗಾತ್ರದ ಹೊಂಡಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಈ ಹೊಂಡಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಬಿದ್ದು ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರಸ್ತೆಯಲ್ಲಿ ಅಧಿಕಾರಿಗಳು, ಸಚಿವರು, ಜಿಲ್ಲಾಧಿಕಾರಿಗಳು ಎಲ್ಲಾ ಹೋಗುತ್ತಾರೆ. ಆದರೆ ಅವರಿಗೆ ಯಾರಿಗೂ ಈ ಹೊಂಡದಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ ಎನ್ನುವುದು ಅರ್ಥವಾಗದಿರುವುದು ಆಶ್ಚರ್ಯ..’’ಎಂದು ಸ್ಥಳೀಯ ವಾಹನ ಚಾಲಕರೊಬ್ಬರು ಇಲ್ಲಿನ ನಿತ್ಯ ಟ್ರಾಫಿಕ್ ಸಮಸ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಪಡೀಲ್ ಬಳಿ ಒಂದು ಕಡೆ ರೈಲ್ವೇ ಕೆಳ ಸೇತುವೆಯ ಕಾಮಗಾರಿ ನಡೆಯುತ್ತಿದೆ. ಆ ಕಾಮಗಾರಿ ನಡೆಯುವ ಕಾರಣದಿಂದಲೇ ಅಲ್ಲಿನ ಮುಖ್ಯ ರಸ್ತೆ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಲು ಕಾರಣವಾಗಿದೆ. ರಸ್ತೆಯ ಹೊಂಡವನ್ನಾದರೂ ಮುಚ್ಚಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬಹುದಲ್ಲಾ.? ರೈಲ್ವೇ ಸೇತುವೆಯ ಕೆಳ ರಸ್ತೆ ಪೂರ್ತಿಯಾಗಲು ಇನ್ನೂ ಕೆಲವು ತಿಂಗಳು ಬೇಕಾದೀತು. ಅಲ್ಲಿಯವರೆಗೆ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ನಾವು ಇದೇ ರೀತಿಯ ನರಕ ಅನುಭವಿಸಬೇಕೆ ?’’ಎಂದು ವಾಹನ ಚಾಲಕ ದಿನೇಶ್ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಾರೆ.







