ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಒದಗಿಸಲಿ: ವಜ್ರದೇಹಿ ಸ್ವಾಮೀಜಿಗೆ ಡಿವೈಎಫ್‌ಐ ಆಗ್ರಹ

ಮಂಗಳೂರು, ಜು. 15: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಲ್ಲಿ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆಯ ಹಂತಕರ ಮಾಹಿತಿ ಇದೆ ಎಂದು ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ತಮ್ಮ ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ. ಒಂದು ವೇಳೆ ಅವರಲ್ಲಿ ಹಂತರ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್‌ಐ ಆಗ್ರಹಿಸಿದೆ.
ಸ್ವಾಮೀಜಿ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಾಗಿದ್ದಾರೆ. ಶರತ್ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ಅವರ ಬಳಿ ಇದ್ದಲ್ಲಿ ಅದನ್ನು ಕೂಡಲೇ ಪೊಲೀಸ್ ಇಲಾಖೆಗೆ ಒದಗಿಸಿಕೊಡಬೇಕು. ಆ ಮೂಲಕ ಶರತ್ ಹಂತಕರ ಬಂಧನಕ್ಕೆ ಸಹಕರಿಸಬೇಕು. ಈ ನೆಲದ ಕಾನೂನು ಪ್ರಕಾರ ಅದು ಒಬ್ಬ ನಾಗರಿಕನ ಕರ್ತವ್ಯ ಕೂಡಾ ಹೌದು. ಒಂದು ವೇಳೆ ಸ್ವಾಮೀಜಿ ಶರತ್ ಹತ್ಯೆಯ ಮಾಹಿತಿಯನ್ನು ಒದಗಿಸದಿದ್ದಲ್ಲಿ ಪೊಲೀಸ್ ಇಲಾಖೆ ಈ ಕೂಡಲೇ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಕೊಲೆ ಪ್ರಕರಣದ ಮಾಹಿತಿ ತಿಳಿದೂ ಮುಚ್ಚಿಡುವುದು ಒಂದು ರೀತಿ ಕೊಲೆಗಾರರಿಗೆ ಸಹಕರಿಸಿದಂತಿದೆ. ಕೊಲೆಗಟುಕರಿಗೆ ಸಹಕರಿಸುವುದು ಕಾನೂನು ಪ್ರಕಾರ ಅಪರಾಧ. ಈ ನಿಟ್ಟಿನಲ್ಲಿ ವಜ್ರದೇಹಿ ಸ್ವಾಮೀಜಿ ತಕ್ಷಣವೇ ತಮ್ಮಲ್ಲಿರುವ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಲಿ ಅಥವಾ ಮಾಹಿತಿ ಮುಚ್ಚಿಟ್ಟ ಆಧಾರದಲ್ಲಿ ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.





