9ನೆ ದಿನಕ್ಕೆ ಕಾಲಿಟ್ಟ ಕರೆಯಂಗಳದ ಧರಣಿ
ಸಾ.ರಾ.ಗೋವಿಂದು, ಆನಂದ ಗುರೂಜಿ ಬೆಂಬಲ

ಮದ್ದೂರು, ಜು.15: ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಸ್ಥಗಿತಗೊಳಿಸಿ ಜಲಾಶಯದ ನಾಲೆಗಳಿಗೆ ಹರಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕಿನ ದೇಶಹಳ್ಳಿ ಕೆರೆಯಂಗಳದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ 9ನೆ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಆನಂದ ಗುರೂಜಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾ.ರಾ.ಗೋವಿಂದು, ಜನಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ನಾಲೆಗಳಿಗೆ ನೀರು ಬಿಡುಗಡೆಗೆ ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಮಹಾದಾಯಿ, ಕಳಶಬಂಡೂರಿ ಪ್ರತಿಭಟನೆ ಆರಂಭವಾಗಿ ಇಂದಿಗೆ ಎರಡು ವರ್ಷಗಳಾಗಿದೆ. ಕೋಲಾರ ಜಿಲ್ಲೆಯ ಜನರು ನಡೆಸುತ್ತಿರುವ ಶಾಸ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ನಡೆಯುತ್ತಿರುವ ಪ್ರತಿಭಟನೆಗೆ ಸರಕಾರಗಳು ಸ್ಪಂದಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯೆಪ್ರವೇಶ ಮಾಡದೆ, ಪರೋಕ್ಷವಾಗಿ ತಮಿಳುನಾಡು ಪರವಾಗಿ ನಿಂತಿದ್ದಾರೆ ಎಂದು ದೂರಿದ ಅವರು, ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲಿಸಬೇಕು. ಕೂಡಲೇ ವಿ.ಸಿ.ನಾಲೆಗೆ ನೀರುಹರಿಸಬೇಕು ಎಂದು ಆಗ್ರಹಿಸಿದರು.
ಜು.17ರ ಸೋಮವಾರ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ ಗೋವಿಂದು, ಚಲನಚಿತ್ರ ನಟರು ಧರಣಿಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗುವುದು ಎಂದರು.
ಆನಂದ ಗುರೂಜಿ ಮಾತನಾಡಿ, ಸರಕಾರಗಳು, ಅಧಿಕಾರಿಗಳು ರೈತರು, ಜನಸಾಮಾನ್ಯರ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು. ಕೂಡಲೇ ನಾಲೆಯಲ್ಲಿ ನೀರುಹರಿಸಿ ಜನಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಬೇಕು ಎಂದು ಮನವಿ ಮಾಡಿದರು.
ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್.ವಿ.ಗಿರೀಶ್‍ಗೌಡ, ಧೃವೇಶ್‍ಗೌಡ, ಧರಣಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್‍ಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಚಂದು, ಲೋಕೇಶ್, ಚನ್ನಪ್ಪ, ರಾಘವ, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.







