ಮೊಸುಲ್‌ನಲ್ಲಿ ಈಗಲೂ 8 ಲಕ್ಷ ಮಂದಿ ನಿರ್ವಸಿತರು: ವಿಶ್ವಸಂಸ್ಥೆ

ಜಿನೇವ, ಜು. 15: ಇರಾಕ್ ನಗರ ಮೊಸುಲ್‌ನಿಂದ ಐಸಿಸ್ ಭಯೋತ್ಪಾದಕರನ್ನು ಹೊರದಬ್ಬಲು ಇರಾಕ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ, ಆದರೆ, ಆ ಪೈಕಿ ಕೇವಲ 2 ಲಕ್ಷ ಮಂದಿ ಮಾತ್ರ ಮನೆಗಳಿಗೆ ಹಿಂದಿರುಗಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೊಸುಲ್‌ನಲ್ಲಿ ಐಸಿಸ್ ವಿರುದ್ಧ ಕಾರ್ಯಾಚರಣೆ ಆರಂಭಗೊಂಡ ಬಳಿಕ ಸುಮಾರು 10.50 ಲಕ್ಷ ನಾಗರಿಕರು ಪಲಾಯನಗೈದಿದ್ದಾರೆ. ಅವರ ಪೈಕಿಇ ಸುಮಾರು 8.25 ಲಕ್ಷ ಮಂದಿ ಈಗಲೂ ನಿರ್ವಸಿತರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗ ಸಂಘಟನೆ (ಐಒಎಮ್) ಹೇಳಿಕೆಯೊಂದರಲ್ಲಿ ತಿಳಿಸಿದೆ.
ಉತ್ತರ ಇರಾಕ್‌ನಲ್ಲಿ ಟೈಗ್ರಿಸ್ ನದಿಯ ದಂಡೆಯಲ್ಲಿರುವ ಈ ನಗರದಲ್ಲಿ 2014ರಲ್ಲಿ 20 ಲಕ್ಷ ಜನಸಂಖ್ಯೆಯಿತ್ತು.
ಮೊಸುಲನ್ನು ಉಗ್ರರ ಹಿಡಿತದಿಂದ ಸಂಪೂರ್ಣವಾಗಿ ಮರುವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಸೋಮವಾರ ಘೋಷಿಸಿದ್ದರು.
ಆದರೆ, ಈಗಲೂ ಹಳೆ ನಗರಕ್ಕೆ ಹೋಗುವುದು ಸಾಧ್ಯವಾಗಿಲ್ಲ. ಅಲ್ಲಿ ಸ್ವಚ್ಛಗೊಳಿಸುವ ಮತ್ತು ನೆಲಬಾಂಬ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ನಿರ್ವಸಿತರ ಸಂಖ್ಯೆಯು ಈ ಪ್ರದೇಶದ ‘ಅತ್ಯಂತ ಭೀಕರ ಬಿಕ್ಕಟ್ಟನ್ನು’ ಬಿಂಬಿಸುತ್ತದೆ ಎಂದು ಇರಾಕ್‌ನಲ್ಲಿ ಐಒಎಂನ ಕಾರ್ಯಾಚರಣೆ ಮುಖ್ಯಸ್ಥ ಥಾಮಸ್ ಲೋತರ್ ವೀಸ್ ಹೇಳುತ್ತಾರೆ.







