ಶಾಂತಿಸಭೆ:ತಹಸೀಲ್ದಾರ್ ಕ್ರಮ ವಿರುದ್ಧ ಪ್ರತಿಭಟನೆ

ಮದ್ದೂರು, ಜ.15: ದೇವಸ್ಥಾನದ ಪೂಜೆ ಸಂಬಂಧ ಶನಿವಾರ ತಹಸೀಲ್ದಾರ್ ಕರೆದಿದ್ದ ಶಾಂತಿಸಭೆಯಲ್ಲಿ ಮುಖಂಡರೊಬ್ಬರನ್ನು ಸಭೆಯಿಂದ ಹೊರಕಳುಹಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಯಿತು.
ತಾಲೂಕಿನ ನಗರಕೆರೆ-ಉಪ್ಪಿನಕೆರೆ ಗ್ರಾಮ ವ್ಯಾಪ್ತಿಗೆ ಸೇರಿದ ಪಟ್ಟಲದಮ್ಮ ದೇವಾಲಯದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ ಸಂಬಂಧ ಉಂಟಾಗಿದ್ದ ಎರಡು ಗುಂಪುಗಳ ನಡುವೆ ವೈಷಮ್ಯ ಉಂಟಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಹರ್ಷ ತಮ್ಮ ಕಚೇರಿಯಲ್ಲಿ ಶಾಂತಿಸಭೆ ಕರೆದಿದ್ದರು.
ಸಭೆಯ ವೇಳೆ ಉಮೇಶ್ ಎಂಬುವರು ಏರುಧ್ವನಿಯಲ್ಲಿ ಮಾತನಾಡಿದ ಕಾರಣ, ಅವರನ್ನು ತಹಸೀಲ್ದಾರ್ ಸಭೆಯಿಂದ ಹೊರಕಳುಹಿಸಿದರು. ಇದರಿಂದ ಕುಪಿತರಾದ ಕೆಲವರು ಸಭೆ ತ್ಯಜಿಸಿ ತಹಸೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದರು.
ಹರ್ಷ, ಸಿಪಿಐ ಪ್ರಭಾಕರ್ ಅವರ ಮನವಿಗೆ ಪ್ರತಿಭಟನೆಗಾರರು ಮಣಿಯದೆ, ಉಪವಿಭಾಗಾಧಿಕಾರಿ ಆಗಮನಕ್ಕೆ ಪಟ್ಟುಹಿಡಿದರು. ಕೊನೆಗೆ, ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ರಾಜೇಶ್, ಪ್ರತಿಭಟನಾಕಾರರನ್ನು ಮನವೊಲಿಸಿದರು. ಪೂಜೆ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಸಲಹೆ ಮಾಡಿದರು.
ನಗರಕೆರೆ ಗ್ರಾಪಂ ಮಾಜಿ ಅಧ್ಯಕ್ಷರಾದ ನ.ಲಿ.ಕೃಷ್ಣ, ಶಿವಚರಣ್, ಸದಸ್ಯ ಸೋಮಶೇಖರ್, ಎಂಪಿಸಿಎಸ್ ಅಧ್ಯಕ್ಷ ಎನ್.ಎಂ. ರಾಮಲಿಂಗಯ್ಯ, ರಾಜಣ್ಣ, ನಾಗರಾಜು, ಇತರೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.





