ಮೂಲ ಸಂಪ್ರದಾಯದ ಮಧುರಂಗಿಯಿಂದ ಫಲ: ಡಾ.ವೈ.ಎನ್.ಶೆಟ್ಟಿ

ಉಡುಪಿ, ಜು.15: ವಿಶೇಷವಾದ ಔಷಧೀಯ ಗುಣ ಹೊಂದಿರುವ ಮಧು ರಂಗಿಯನ್ನು ಮೂಲ ಸಂಪ್ರದಾಯದಂತೆ ನಡೆಸಿದರೆ ಮಾತ್ರ ಅದರ ಲ ದೊರೆಯಲು ಸಾಧ್ಯ. ಆದರೆ ಇಂದು ಅದು ತನ್ನ ಮೂಲ ಸಂಪ್ರದಾಯವನ್ನು ಕಳೆದುಕೊಂಡು ವಿಶೇಷ ಹವ್ಯಾಸವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ತುಳು ಜನಪದ ಚಿಂತಕ ಡಾ.ವೈ.ಎನ್.ಶೆಟ್ಟಿ ಹೇಳಿದ್ದಾರೆ.
ಉಡುಪಿ ತುಳುಕೂಟದ ವತಿಯಿಂದ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ‘ಮದರೆಂಗಿದ ರಂಗ್’ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮಧುರಂಗಿ ದೈವಿಕ ಭಾವನೆಯನ್ನು ಮೂಡಿಸುತ್ತದೆ. ಮನಸ್ಸಿಗೆ ಶಾಂತಿ, ಆನಂದ ನೀಡುವ ಶಕ್ತಿ ಮಧುರಂಗಿಗೆ ಇದೆ. ಗೋರಂಟಿಗೆ ಸೊಪ್ಪು, ಕೆಂಪಿರುವೆ, ಎಳೆ ಅಡಿಕೆ ಹಾಕಿ ಮಧುರಂಗಿ ಅರೆಯುವುದು ನಮ್ಮ ಸಂಪ್ರದಾಯ. ಮದುವೆಗೆ ಸಂಬಂಧಿಸಿದಂತೆ ಮಧುರಂಗಿ ಹಾಕುವ ವೇಳೆ ಕಾಲಿಗೆ ಹಾಕ ಬಾರದು. ಅದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ನೃತ್ಯದ ವೇಳೆ ಮಾತ್ರ ಕಾಲಿಗೆ ಹಾಕಲಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಸಂಘಟಕಿ ಸರಳಾ ಕಾಂಚನ್ ಮಾತನಾಡಿ, ತುಳುನಾಡಿನ ಪವಿತ್ರ ಸಂಪ್ರದಾಯ ಮಧುರಂಗಿಯ ಮೂಲ ಮಹತ್ವವನ್ನು ಇಂದಿನ ಯುವಜನತೆಗೆ ತಿಳಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ. ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಚಾಲಕಿ ತಾರಾ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯಶೋಧಾ ಕೇಶವ್ ವಂದಿಸಿದರು. ಸರೋಜಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಗೆ ರಂಗೋಲಿ ಬಿಡಿಸುವ ಸ್ಪರ್ಧೆ, ಹೂಕಟ್ಟುವ ಸ್ಪರ್ಧೆ, ಬತ್ತಿಕಟ್ಟುವ ಸ್ಪರ್ಧೆ, ಮಧುರಂಗಿ ಸ್ಪರ್ಧೆ ಹಾಗೂ ಮಕ್ಕಳಿಗೆ ತೆಂಗಿನ ಗರಿಯಲ್ಲಿ ಆಟದ ಸಾಮಾಗ್ರಿ ತಯಾರಿಕೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.







