ಜೈಲಿಗೆ ಡಿಜಿಪಿ-ಡಿಐಜಿ ದಿಢೀರ್ ಭೇಟಿ
ಕೈದಿಗಳ ಕಾದಾಟ, ಲಾಠಿಚಾರ್ಜ್

ಬೆಂಗಳೂರು, ಜು.15: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಡಿಜಿಪಿ (ಕಾರಾಗೃಹ) ಸತ್ಯನಾರಾಯಣರಾವ್, ಡಿಐಜಿ (ಕಾರಾಗೃಹ) ಡಿ.ರೂಪಾ ಇಬ್ಬರು ಪ್ರತ್ಯೇಕವಾಗಿ ಜೈಲಿಗೆ ದಿಢೀರ್ ಭೇಟಿಯ ನಂತರ ಕೈದಿಗಳ ನಡುವೆ ಕಾದಾಟವೇರ್ಪಟ್ಟು, ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ತಹಬದಿಗೆ ತಂದಿರುವುದಾಗಿ ತಿಳಿದು ಬಂದಿದೆ. ಶನಿವಾರ ಡಿಐಜಿ (ಕಾರಾಗೃಹ) ಡಿ.ರೂಪಾ ಭೇಟಿ ನೀಡಿದ್ದ ವೇಳೆ, ಮಹಿಳಾ ಕೈದಿಗಳು ಧಿಕ್ಕಾರ ಕೂಗಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಬ್ಯಾರಕ್ ಬಳಿ ಮಹಿಳಾ ಕೈದಿಗಳು ರೂಪಾರನ್ನು ತರಾಟೆಗೆ ತೆಗೆದುಕೊಂಡಿದ್ದು, ಜೈಲಿನಲ್ಲಿ ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಈ ಹಿಂದೆ ಡಿಐಜಿ ರೂಪಾ ವರದಿ ನೀಡಿದ್ದರು.
ಇದನ್ನು ವಿರೋಧಿಸಿ, ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಿ ರೂಪಾ ವಿರುದ್ಧ ಮಹಿಳಾ ಕೈದಿಗಳು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಳಿಕ ಡಿಐಜಿ ರೂಪಾ ಹಾಗೂ ಜೈಲು ಅಧೀಕ್ಷಕ ಕೃಷ್ಣ ಕುಮಾರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೈದಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದೀಯಾ ಎಂದು ರೂಪಾ ಆರೋಪಿಸಿದರು ಎನ್ನಲಾಗಿದ್ದು, ಇಬ್ಬರ ನಡುವೆ ಜೈಲಿನ ಆವರಣದಲ್ಲೇ ಮಾತಿನ ಚಕಮಕಿ ನಡೆಯಿತು. ಬಳಿಕ ರೂಪಾ ನೋಂದಣಿ ಪುಸ್ತಕದಲ್ಲಿ ದಾಖಲಿಸಿ ಜೈಲಿನಿಂದ ಹೊರಬಂದರು ಎಂದು ತಿಳಿದುಬಂದಿದೆ. ಜೈಲಿಗೆ ರೂಪಾ ದಿಢೀರ್ ಭೇಟಿ ನೀಡಿದ ನಂತರ, ಜೈಲಿನ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿರುವ ಅನುಮಾನ ಹಾಗೂ ಜೈಲಿನೊಳಗಡೆಯ ವಿದ್ಯಮಾನಗಳನ್ನು ಮಾಧ್ಯಮಗಳಿಗೆ ಕೊಟ್ಟವರು ಯಾರು ಎಂಬ ಬಗ್ಗೆ ಕೈದಿಗಳಲ್ಲಿಯೇ ವಾಗ್ವಾದ ಶುರುವಾಗಿ, ಎರಡು ಗುಂಪುಗಳಾಗಿ, ಕಾದಾಟ ಏರ್ಪಟ್ಟಿದೆ.
ಕೈದಿಗಳ ಕಾದಾಟವನ್ನು ನಿಯಂತ್ರಿಸಲು 30 ಮಂದಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಾಗಿ ತಿಳಿದುಬಂದಿದೆ. ಡಿಜಿಪಿ ಭೇಟಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ್ದು, ಆ ಸಮಿತಿ ಜೈಲಿಗೆ ಭೇಟಿ ನೀಡಿ ಪರಿಶೀಲಿಸುವ ಮುನ್ನವೇ ಬಂದಿಖಾನೆ ಮಹಾನಿರ್ದೇಶಕ ಸತ್ಯನಾರಾಯಣ ರಾವ್ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶನಿವಾರ ಬೆಳಗ್ಗೆ ಕಾರಾಗೃಹ ಡಿಜಿಪಿ ಸತ್ಯನಾರಾಯಣ ರಾವ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ, ವಿ.ಕೆ.ಶಶಿಕಲಾ ನಟರಾಜನ್ ಅವರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಹಿಂಪಡೆದುಕೊಂಡು ಜೈಲಿನ ಸಮವಸ್ತ್ರ ಧರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ನೋಟಿಸ್
ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಅವ್ಯವಹಾರ ಗಳ ಬಗ್ಗೆ ಸೇವಾ ನಿಯಮಗಳನ್ನು ಉಲ್ಲಂಘಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಬಂಧ ಬಂದಿಖಾನೆ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಮತ್ತು ಡಿಐಜಿ ರೂಪಾ ಅವರಿಗೆ ರಾಜ್ಯ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿದೆ.
‘ಭಾಗ-2’ ವರದಿ ಸಲ್ಲಿಸಿದ ಡಿ.ರೂಪಾ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಮೊದಲ ವರದಿಯಲ್ಲಿ ಬಯಲಿಗೆ ತಂದ ಡಿಐಜಿ ಡಿ.ರೂಪಾ, ಮತ್ತೆ ಎರಡನೆ ವರದಿಯನ್ನೂ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಸಲ್ಲಿಸಿರುವುದಾಗಿ ಗೊತ್ತಾಗಿದೆ.
ಶನಿವಾರ ‘ಭಾಗ-2’ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಅವರಿಗೆ ಲಿಖಿತ ರೂಪದಲ್ಲಿ ಸಲ್ಲಿಸಲಾಗಿದ್ದು, ಈ ಎರಡನೆ ವರದಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ವೇಳೆ ಹ್ಯಾಂಡಿಕ್ಯಾಮ್ ಮೂಲಕ ಎಲ್ಲವನ್ನೂ ಚಿತ್ರೀಕರಣ ಮಾಡಿಕೊಂಡಿದ್ದೆ. ಇಲ್ಲಿ ಕ್ಯಾಮ ರಾ ಅಳವಡಿಸಿದ್ದರಿಂದ ಯಾವುದೇ ರೀತಿಯ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೆಟ್‌ವರ್ಕ್ ಕಡಿತಗೊಂಡಿರುತ್ತದೆ. ಹೀಗಾಗಿ ಹ್ಯಾಂಡಿಕ್ಯಾಮ್‌ನಲ್ಲಿ ಅಲ್ಲಿನ ನೈಜ ಚಿತ್ರಣವನ್ನು ಸೆರೆ ಹಿಡಿದು ತಮ್ಮ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಇದನ್ನು ಡೌನ್‌ಲೋಡ್ ಮಾಡಿ ಪೆನ್‌ಡ್ರೈವ್‌ಗೆ ಹಾಕುವಂತೆ ಸೂಚಿಸಿದ್ದೆ ಎಂದು ವರದಿಯಲ್ಲಿ ಡಿ.ರೂಪಾ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಸೂಚನೆಯಂತೆ ಹ್ಯಾಂಡಿಕ್ಯಾಮ್‌ನಲ್ಲಿದ್ದ ಚಿತ್ರಣವನ್ನು ವೀಕ್ಷಿಸಿದ ಅಧಿಕಾರಿ ಸಂಪೂರ್ಣವಾಗಿ ಅದನ್ನು ನಾಶಪಡಿಸಿ ಖಾಲಿ ಪೆನ್‌ಡ್ರೈವ್‌ಗೆ ಬೇರೆ ಯಾವುದೋ ಚಿತ್ರಗಳನ್ನು ಕಾಪಿ ಮಾಡಿದ್ದಾರೆ. ಅಲ್ಲದೆ, ತಾವು ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಅನೇಕ ಸಿಸಿಟಿವಿಗಳನ್ನು ಬಂದ್ ಮಾಡಲಾಗಿತ್ತು. ಇದೂ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನ ಇಲ್ಲದಿದ್ದರೂ ಶಶಿಕಲಾ, ಅಬ್ದುಲ್ ಕರೀಂಲಾಲ ತೆಲಗಿ ಸೇರಿ ಅನೇಕರಿಗೆ ಪ್ರತ್ಯೇಕ ಊಟ, ಕೊಠಡಿ, ಬಟ್ಟೆ ಸೇರಿದಂತೆ ಎಲ್ಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳ ಕೈ ಬೆಚ್ಚಗೆ ಮಾಡಿದರೆ ಇಲ್ಲಿ ಎಲ್ಲವೂ ರಾಜಾರೋಷವಾಗಿ ಸಿಗುತ್ತದೆ. ಶಶಿಕಲಾಗೆ ಪ್ರತ್ಯೇಕ ಕೊಠಡಿ, ಊಟ, ಟಿವಿ, ಮೊಬೈಲ್, ಹಾಸಿಗೆ, ದಿಂಬು, ಅತಿಥಿಗಳ ಭೇಟಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಇದೇ ಸೌಲಭ್ಯಗಳನ್ನು ತೆಲಗಿಗೂ ಸಹ ನೀಡಲಾಗಿತ್ತು ಎಂದು ತಾವು ನೀಡಿರುವ ಎರಡನೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಮೂರು ವಿಚಾರಣಾಧೀನ ಕೈದಿಗಳಿಗೆ ವಕೀಲರು ಇಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ







