ಉಲ್ಫಾ ನಾಯಕರ ವಿರುದ್ಧ ಆರೋಪಪಟ್ಟಿ ದಾಖಲು

ಹೊಸದಿಲ್ಲಿ,ಜು.15: ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಕ್ಕಾಗಿ ಮತ್ತು ಭಾರತ ದೇಶದ ವಿರುದ್ಧ ಯುದ್ಧ ಸಾರಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯು ಬಂಡುಕೋರ ಸಂಘಟನೆ ಉಲ್ಫಾದ ಮಾತುಕತೆ ವಿರೋಧಿ ಬಣದ ಮುಖ್ಯಸ್ಥ ಪರೇಶ್ ಬರುವಾ ಮತ್ತು ಅದರ ಅಧ್ಯಕ್ಷ ಮುಕುಲ್ ಹಝಾರಿಕಾ ಅವರ ವಿರುದ್ಧ ಗುವಾಹಟಿಯ ಎನ್‌ಐಎ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದೆ.
2013ರಲ್ಲಿ ದಾಖಲಾಗಿದ್ದ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಬಂಧಿತ ಉಲ್ಫಾ ಉಗ್ರ ಗಗನ್ ಹಝಾರಿಕಾ ಮತ್ತು ತಲೆಮರೆಸಿಕೊಂಡಿರುವ ಆರೋಪಿಗಳಾದ ಬರುವಾ ಹಾಗೂ ಮುಕುಲ್ ಅವರನ್ನು ಹೆಸರಿಸಲಾಗಿದೆ. ಬರುವಾ ಮ್ಯಾನ್ಮಾರ್‌ನಲ್ಲಿದ್ದರೆ, ಮುಕುಲ್ ಬ್ರಿಟನ್‌ನಲ್ಲಿದ್ದಾನೆ. ಇಬ್ಬರನ್ನೂ ತಲೆವಮರೆಸಿಕೊಂಡಿರು ಆರೋಪಿಗಳೆಂದು ಘೋಷಿಸಲಾಗಿದ್ದು, ಅವರ ವಿರುದ್ಧ ಮುಂದಿನ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಉಲ್ಫಾದ ದೃಷ್ಟಿ ರಾಜಖೋವಾ ಮತ್ತು ಇತರ ಹಿರಿಯ ನಾಯಕರ ವಿರುದ್ಧ ತನಿಖೆಯನ್ನು ಮುಂದುವರಿಸುವುದಾಗಿ ಎನ್‌ಐಎ ಶನಿವಾರ ಹೇಳಿದೆ.





