ಪಡುಬೆಳ್ಳೆ ಆತ್ಮಹತ್ಯೆ: ತನಿಖೆ ಮುಂದುವರಿಕೆ
ಉಡುಪಿ, ಜು.15: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದ ಕಾರಣ ಇನ್ನೂ ಕಗ್ಗಂಟಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶಂಕರ ಆಚಾರ್ಯರು ಮಿತ್ರರಲ್ಲಿ ಮತ್ತು ಚಿನ್ನ ವ್ಯವಹಾರಕ್ಕೆ ಸಂಬಂಧಿಸಿ ಲಕ್ಷಾಂತರ ರೂ. ಸಾಲವನ್ನು ಮಾಡಿದ್ದು, ಅಲ್ಲದೆ ಮಗಳು ಶ್ರೀಯಾ ಆಚಾರ್ಯರ ಶಿಕ್ಷಣಕ್ಕೆ 1.75ಲಕ್ಷ ರೂ. ಬ್ಯಾಂಕಿನಿಂದ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಈ ದಿಕ್ಕಿನಲ್ಲಿ ಪೊಲೀಸರು ಹಲವರ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
‘ಆತ್ಮಹತ್ಯೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅವರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವುದು ಮತ್ತು ಚಿನ್ನದ ಸಾಲಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗು ತ್ತಿದೆ. ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಶಂಕರ ಆಚಾರ್ಯರು ಇತರ ಮೂವರಿಗೆ ಗೊತ್ತಿಲ್ಲದೆ ಅನ್ನಕ್ಕೆ ವಿಷ ಹಾಕಿಕೊಟ್ಟಿದ್ದಾರೆಯೇ ಎಂಬುದು ಕೂಡ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅನ್ನದ ಸ್ಯಾಂಪಲನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.





