"ಕಲ್ಲಡ್ಕ ಚಲೋ" ಮುಂದೂಡಿಕೆ: ಎಸ್ ಡಿಪಿಐ
ಮಂಗಳೂರು, ಜು.15: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ‘ಕಲ್ಲಡ್ಕ ಚಲೋ’ ಹೋರಾಟದ ಬಗ್ಗೆ ವಿಷಯ ಪ್ರಸ್ತಾಪಿಸಿತ್ತು. ಪಕ್ಷದ ನ್ಯಾಯಯುತ ಬೇಡಿಕೆಗಳು ಈಡೇರದೇ ಇದ್ದಲ್ಲಿ ಜುಲೈ 15ರಂದು ಹೋರಾಟದ ರೂಪುರೇಷೆ ಹಾಗೂ ದಿನಾಂಕವನ್ನು ಪ್ರಕಟಿಸುವುದಾಗಿ ಹೇಳಿತ್ತು. ಇದೀಗ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿರುವುದರಿಂದ ಹಾಗೂ ಸಂಘಪರಿವಾರದ ಮುಖಂಡರ ಮೇಲೆ ಪ್ರಕರಣ ದಾಖಲಿಸಿರುವುದರಿಂದ "ಕಲ್ಲಡ್ಕ ಚಲೋ"ವನ್ನು ಮುಂದೂಡಲಾಗಿದೆ ಎಂದು ಎಸ್ ಡಿಪಿಐ ಹೇಳಿದೆ.
ಎಸ್.ಡಿ.ಪಿ.ಐ. ಅಮ್ಮುಂಜೆ ವಲಯಾಧ್ಯಕ್ಷ ಅಶ್ರಫ್ ಕಲಾಯಿ ಹತ್ಯೆಯ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವುದು, ಹತ್ಯೆಯ ಹಿಂದಿರುವ ಪ್ರಮುಖ ರೂವಾರಿಗಳಾದ ಶರಣ್ ಪಂಪ್ ವೆಲ್ ಹಾಗೂ ಪ್ರಭಾಕರ್ ಭಟ್ ರನ್ನು ಬಂಧಿಸಿ ತನಿಖೆಗೊಳಪಡಿಸಬೇಕು, ಕಲ್ಲಡ್ಕದಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ ಬಂಧಿಸಲಾದ ಅಮಾಯಕ ಯುವಕರನ್ನು ಬಿಡುಗಡೆಗೊಳಿಸುವುದು ಮತ್ತು ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯಲು ಪ್ರಚೋದನೆಯನ್ನು ನೀಡುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರನ್ನು ಹದ್ದುಬಸ್ತಿನಲ್ಲಿಡುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು "ಕಲ್ಲಡ್ಕ ಚಲೋ" ಹೋರಾಟ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಅದರ ಬಳಿಕ ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಘಟನೆಗಳಿಂದ ಪ್ರಸ್ತುತ 144 ಸೆಕ್ಷನ್ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವ ಕಾರಣದಿಂದ, ಜುಲೈ 21ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ, ಮುಖ್ಯಮಂತ್ರಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿರುವುದರಿಂದ ‘ಕಲ್ಲಡ್ಕ ಚಲೋ’ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಸ್ ಡಿಪಿಐ ಹೇಳಿದೆ.
ಅದೇ ರೀತಿ ಪ್ರಕರಣ ದಾಖಲಾದ ಸಂಘಪರಿವಾರದ ನಾಯಕರನ್ನು ಕೂಡಲೇ ಬಂಧಿಸಬೇಕೆಂದು ಮತ್ತು ಪ್ರಚೋದನಕಾರಿ ಭಾಷಣ, ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಜಿಲ್ಲೆಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಬೇಕು ಎಂದು ಎಸ್ ಡಿಪಿಐ ಆಗ್ರಹಿಸಿದೆ.







