ರಶ್ಯದ ಮಾಜಿ ಬೇಹುಗಾರನನ್ನೂ ಟ್ರಂಪ್ ಜೂನಿಯರ್ ಭೇಟಿಯಾಗಿದ್ದರು:‘ಎನ್‌ಬಿಸಿ ನ್ಯೂಸ್’ ವರದಿ

ವಾಶಿಂಗ್ಟನ್, ಜು. 15: ಹಿಲರಿ ಕ್ಲಿಂಟನ್ ಕುರಿತ ಘಾತಕ ಮಾಹಿತಿ ಪಡೆಯುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಕಳೆದ ವರ್ಷದ ಜೂನ್‌ನಲ್ಲಿ ರಶ್ಯದ ವಕೀಲೆಯೊಬ್ಬರನ್ನು ಭೇಟಿಯಾದಾಗ ಅಲ್ಲಿ ರಶ್ಯದ ಮಾಜಿ ಬೇಹುಗಾರರೊಬ್ಬರೂ ಇದ್ದರು ಎಂದು ಎನ್‌ಬಿಸಿ ನ್ಯೂಸ್ ಶುಕ್ರವಾರ ವರದಿ ಮಾಡಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಅಭಿಯಾನದ ವೇಳೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ಹಿನ್ನಡೆಯಾಗುವ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ರಶ್ಯದ ವಕೀಲೆ ನಟಾಲಿಯಾ ವೆಸೆಲ್‌ನಿಟ್‌ಸ್ಕಯ ಅವರನ್ನು ಭೇಟಿಯಗಲು ಟ್ರಂಪ್ ಜೂನಿಯರ್ ಹೋಗಿದ್ದರು. ಆ ಸಭೆಗೆ ನಟಾಲಿಯಾ ರಶ್ಯ-ಅಮೆರಿಕನ್ ಲಾಬಿಗಾರರೊಬ್ಬರನ್ನು ಕರೆತಂದಿದ್ದರು. ಆ ವ್ಯಕ್ತಿ ಹಿಂದೆ ರಶ್ಯ ಬೇಹುಗಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು ಎಂದು ಎನ್‌ಬಿಸಿ ನ್ಯೂಸ್ ಹೇಳಿದೆ.
ರಶ್ಯ ಮತ್ತು ಅಮೆರಿಕ ಪೌರತ್ವಗಳೆರಡನ್ನೂ ಹೊಂದಿರುವ ಈ ವ್ಯಕ್ತಿ ಸೋವಿಯತ್‌ನ ಮಾಜಿ ಬೇಹುಗಾರಿಕಾ ನಿಗ್ರಹ ಅಧಿಕಾರಿಯಾಗಿದ್ದರು. ಅವರು ಈಗಲೂ ರಶ್ಯದ ಬೇಹುಗಾರಿಕೆ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕೆಲವು ಅಮೆರಿಕ ಅಧಿಕಾರಿಗಳು ಭಾವಿಸಿದ್ದಾರೆ ಎಂದು ಅದು ಹೇಳಿದೆ.





