ಅತ್ಯಂತ ಹೆಚ್ಚಿನ ಅನಪೇಕ್ಷಿತ ಕರೆಗಳು ಬರುವುದೇ ಭಾರತೀಯರಿಗೆ !

ಹೊಸದಿಲ್ಲಿ,ಜು.15: ಅನಪೇಕ್ಷಿತ ಕರೆಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಹೆಚ್ಚಿನವರ ಗಮನಕ್ಕೆ ಬಂದಿರಲಿಕ್ಕಿಲ್ಲ. 20 ದೇಶಗಳಲ್ಲಿ ನಡೆಸಿದ ಸಮೀಕ್ಷಾ ವರದಿಯೊಂದು 2017ರಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಅನಪೇಕ್ಷಿತ ಕರೆಗಳನ್ನು ಸ್ವೀಕರಿಸಿದವರು ಭಾರತೀಯರು ಎನ್ನುವುದನ್ನು ಬಹಿರಂಗಗೊಳಿಸಿದೆ.
ಜಾಗತಿಕವಾಗಿ 250 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಆ್ಯಪ್ ಟ್ರೂಕಾಲರ್ ನಡೆಸಿರುವ ಅಧ್ಯಯನದಂತೆ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರ ತಿಂಗಳಿಗೆ 22 ಅಂದರೆ ಹೆಚ್ಚುಕಡಿಮೆ ದಿನಕ್ಕೊಂದು ಅನಪೇಕ್ಷಿತ ಕರೆಯನ್ನು ಸ್ವೀಕರಿಸುತ್ತಿದ್ದಾನೆ. ಪ್ರತಿ ಬಳಕೆದಾರ ತಿಂಗಳಿಗೆ 20ಕ್ಕೂ ಅಧಿಕ ಅನಪೇಕ್ಷಿತ ಕರೆಗಳನ್ನು ಸ್ವೀಕರಿಸುತ್ತಿರುವ ಅಮೆರಿಕ ಮತ್ತು ಬ್ರಝಿಲ್ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ.
ಭಾರತೀಯರು ಸ್ವೀಕರಿಸುತ್ತಿರುವ ಅರ್ಧಕ್ಕೂ ಹೆಚ್ಚಿನ(ಶೇ.54) ಅನಪೇಕ್ಷಿತ ಕರೆಗಳು ದೂರಸಂಪರ್ಕ ಕಂಪನಿಗಳಿಂದಲೇ ಬರುತ್ತಿವೆ. ಹೆಚ್ಚಿನ ಕಂಪನಿಗಳು ಉಚಿತ ಡಾಟಾ ಅಥವಾ ಮಿತಿಯಿಲ್ಲದ ಕರೆಗಳ ವಿಶೇಷ ಕೊಡುಗೆಗಳನ್ನು ಮುಂದಿರಿಸಿಕೊಂಡು ಕರೆಗಳನ್ನು ಮಾಡುತ್ತವೆ. ಕರೆಗಳ ಸುರಿಮಳೆ ಒಂದು ಮಿತಿಯನ್ನು ಮೀರುವವರೆಗೆ ಗ್ರಾಹಕರು ಇವುಗಳನ್ನು ಸಹಿಸಿಕೊಳ್ಳುತ್ತಿರುತ್ತಾರೆ ಎಂದು ಟ್ರೂಕಾಲರ್ ತನ್ನ ವರದಿಯಲ್ಲಿ ಹೇಳಿದೆ.
ಕಿರಿಕಿರಿಯನ್ನುಂಟು ಮಾಡುವ ಕರೆಗಳು ಶೇ.20ರಷ್ಟು ಪಾಲು ಪಡೆದುಕೊಂಡಿವೆ. ಭಾರತೀಯರು ಸ್ವೀಕರಿಸುತ್ತಿರುವ ಇತರ ಕರೆಗಳಲ್ಲಿ ಶೇ.23 ರಷ್ಟು ಟೆಲಿ ಮಾರ್ಕೆಟಿಂಗ್ ಕಂಪನಿಗಳದ್ದಾಗಿದ್ದರೆ ಶೇ.9 ಹಣಕಾಸು ಸೇವೆಗಳಿಗೆ ಮತ್ತು ಶೇ.3ರಷ್ಟು ಕರೆಗಳು ವಿಮೆ ಮತ್ತು ಹಗರಣಗಳಿಗೆ ಸಂಬಂಧಿಸಿವೆ.
ಬಳಕೆದಾರರಿಗೆ ಅನಪೇಕ್ಷಿತ ಕರೆಗಳ ಕಿರಿಕಿರಿಯನ್ನು ತಪ್ಪಿಸಲೆಂದೇ ಟ್ರಾಯ್ ‘ಡು ನಾಟ್ ಡಿಸ್ಟರ್ಬ್’ ನೋಂದಣಿ ವ್ಯವಸ್ಥೆ ಮತ್ತು ಅನಪೇಕ್ಷಿತ ವಾಣಿಜ್ಯ ಕರೆಗಳ ನಿಯಂತ್ರಣ ಕ್ರಮಗಳನ್ನು ರೂಪಿಸಿದ್ದರೂ ಈ ಕರೆಗಳಿಗೆ ಕಡಿವಾಣ ಬಿದ್ದಿಲ್ಲ.
ಇತರ ದೇಶಗಳ ಕಥೆಯೂ ಭಿನ್ನವಾಗಿಲ್ಲ. ಅಮೆರಿಕದಲ್ಲಿ ಕಳೆದೆರಡು ತಿಂಗಳಲ್ಲಿ ಅನಪೇಕ್ಷಿತ ಕರೆಗಳ ಸಂಖ್ಯೆಯಲಿ ಶೇ.20ರಷ್ಟು ತೀವ್ರ ಏರಿಕೆಯಾಗಿದೆ. ಬ್ರಝಿಲ್‌ನಲ್ಲಿ ದೂರಸಂಪರ್ಕ ಕಂಪನಿಗಳ ಕಿರಿಕಿರಿಯೇ ಹೆಚ್ಚು (ಶೇ.33ರಷ್ಟು ಕರೆಗಳು). ಚಿಲಿ, ದ.ಆಫ್ರಿಕಾ ಮತ್ತು ಮೆಕ್ಸಿಕೋಗಳು ಈ ಪಟ್ಟಿಯಲ್ಲಿ ಅನುಕ್ರಮವಾಗಿ 4,5 ಮತ್ತು 6ನೇ ಸ್ಥಾನಗಳಲ್ಲಿವೆ.







