ಕ್ರೈಸ್ತರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ

ಬಣಕಲ್, ಜು.16: ಸರಕಾರ ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದ ಮೂಲಕ ಕ್ರೈಸ್ತರಿಗಾಗಿ ವಿವಿಧ ಯೋಜನೆಗಳನ್ನು ಮಂಜೂರು ಮಾಡಿದ್ದು, ಕ್ರೈಸ್ತರು ಇದರ ಅರಿವಿನ ಕೊರತೆಯಿಂದ ಅಲೆದಾಡುತ್ತಿದ್ದಾರೆ. ಹಾಗಾಗಿ ಇಲಾಖೆಯಿಂದ ಕ್ರೈಸ್ತರಿಗೆ ನೇರ ಮಾಹಿತಿ ನೀಡುತ್ತಿದ್ದೇವೆ. ಅಲ್ಪಸಂಖ್ಯಾತ ಅಭಿವೃಧ್ದಿ ನಿಗಮದಿಂದ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಸ್ವಾಮಿ ಹೇಳಿದರು.
ಅವರು ಬಣಕಲ್ ಬಾಲಿಕ ಮರಿಯ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಸರಕಾರದ ಯೋಜನೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಗಮದಿಂದ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಯೋಜನೆ, ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ವಸತಿ ಶಾಲಾ ಯೋಜನೆಯ ಸೌಲಭ್ಯ, ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳಿಗೆ ಅನುದಾನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತರಬೇತಿ ಯೋಜನೆ, ಕಾನೂನು ಪದವೀಧರರಿಗೆ ಶಿಷ್ಯವೇತನ, ಬಿದಾಯಿ ಯೋಜನೆ, ಸಮುದಾಯ ಭವನ ನಿರ್ಮಾಣ ಯೋಜನೆ, ಚರ್ಚ್ ದುರಸ್ಥಿ ಮತ್ತು ನವೀಕರಣ, ಕ್ರೈಸ್ತ ಸಮುದಾಯದ ಅಭಿವೃಧ್ದಿ ಯೋಜನೆಗಳು ಅನುಷ್ಠಾನದಲ್ಲಿದ್ದು, ಕ್ರೈಸ್ತರು ಪ್ರಯೋಜನ ಪಡೆಯಲು ಸಲಹೆ ಮಾಡಿದರು.
ಮಲೆನಾಡು ಕ್ರೈಸ್ತರ ಸಂಘದ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಕ್ರೈಸ್ತರ ಮಾರ್ಗದರ್ಶಿ ಜೇಮ್ಸ್ ಡಿಸೋಜ ಮಾತನಾಡಿ, ಸರಕಾರದ ಯೋಜನೆಗಳು ಮಾಹಿತಿಯ ಕೊರತೆಯಿಂದ ಸರಕಾರಕ್ಕೆ ವಾಪಾಸ್ ಹೋಗಬಾರದು. ಅವುಗಳನ್ನು ನಮ್ಮ ಸಮುದಾಯದವರು ಪ್ರಯೋಜನ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರೈಸ್ತ ಧರ್ಮಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಮಾಹಿತಿ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಪ್ರ.ದರ್ಜೆ ಸಹಾಯಕ ರಾಜಪ್ಪ ಮಾತನಾಡಿ, ಗಂಗಾಕಲ್ಯಾಣ ಯೋಜನೆ ಅಂದರೆ ನೂತನವಾಗಿ ಮದುವೆಯಾಗುವವರಿಗೆ ಅವರ ಮದುವೆಯ ದಾಖಲೆ ತೋರಿಸಿ ಅನುದಾನ ಪಡೆಯಬಹುದಾಗಿದೆ. ವಿದ್ಯಾಸಿರಿ ಯೋಜನೆಯಲ್ಲಿ ಬಿಎಸ್ಸಿ ನರ್ಸಿಂಗ್ ಮತ್ತು ಎಎನ್‌ಎಂ ಕೋರ್ಸ್ ಮಾಡುವವರಿಗೆ 35 ಸಾವಿರದವರೆಗೂ ನಿರ್ವಹಣ ವೆಚ್ಚ ನೀಡಲಾಗುತ್ತದೆ. ಎಲ್ಲಾ ಯೋಜನೆಗಳಿಗೂ ಆ.10 ಕೊನೆಯ ದಿನವಾಗಿದೆ. ಯಾವುದೇ ಯೋಜನೆಗಳ ಸಂಪೂರ್ಣ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08262-220443/220036/220065 ಅಥವಾ ಮಲೆನಾಡು ಕ್ರೈಸ್ತ ಸಂಘದ ಅಧ್ಯಕ್ಷರಾದ ಜೇಮ್ಸ್ ಡಿಸೋಜ 9449162788 ಅವರಿಗೆ ಸಂಪರ್ಕಿಸಬಹುದು ಎಂದು ರಾಜಪ್ಪ ಹೇಳಿದರು.
ಅಲ್ಪಸಂಖ್ಯಾತ ಕ್ರೈಸ್ತರ ಯೋಜನೆಗಳ ಮಾಹಿತಿ ಕಾರ್ಯಕ್ರಮದಲ್ಲಿ ದ್ವಿತೀಯ ದರ್ಜೆ ಸಹಾಯಕ ವಿ.ಎಚ್.ರಮೇಶ್, ತಾಲೂಕು ಮಾಹಿತಿ ಕೇಂದ್ರದ ಅತಾವು ರೆಹಮಾನ್, ಸಿಬ್ಬಂದಿಗಳಾದ ಅತೀಫ್, ಇಜಾಝ್ಅಹಮ್ಮದ್, ಬಣಕಲ್ ಧರ್ಮಗುರು ಪಾದರ್ ಆಲ್ಬರ್ಟ್ ಡಿಸಿಲ್ವ ಮತ್ತಿತರರಿದ್ದರು. ಪಾದರ್ ಆಲ್ಬರ್ಟ್ ಡಿಸಿಲ್ವ ಸ್ವಾಗತಿಸಿ ವಂದಿಸಿದರು.







