'ಓದಿಗಾಗಿ ತಮ್ಮ ಬಳಿಯಿದ್ದ ಬೈಕ್ ಕೂಡ ಮಾರಿದ್ದೆ' : ಎಸ್.ಪಿ. ಅಭಿನವ್ ಖರೆ
ಶಿವಮೊಗ್ಗ, ಜು. 17: 'ತಾವು ಚಿಕ್ಕವರಿದ್ದಾಗ ಓದಲು ಸಾಕಷ್ಟು ತೊಂದರೆಯಿತ್ತು. ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಸರಿಯಿರಲಿಲ್ಲ. ಬ್ಯಾಂಕ್‍ನಿಂದ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದೆ. ತಮ್ಮ ಬಳಿಯಿದ್ದ ಬೈಕ್ ಕೂಡ ಮಾರಾಟ ಮಾಡಿದ್ದೆ. ಕಷ್ಟಪಟ್ಟು ಓದಿ ಈ ಸ್ಥಾನಕ್ಕೆ ಬಂದಿದ್ದೆನೆ' ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ.
ನಗರದ ಕೆ.ಆರ್.ಪುರಂ ರಸ್ತೆಯಲ್ಲಿ ಅಸ್ಸಾರ್ ಮೊಹಲ್ಲಾ ಯುವ ಜನ ಸಂಘ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ನೋಟ್‍ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವೊಮ್ಮೆ ಓದಿಗೆ ಬಡತನ ಅಡ್ಡಿಯಾಗುತ್ತದೆ. ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಪರಿಶ್ರಮ ಪಡಬೇಕು. ಭವಿಷ್ಯದಲ್ಲಿ ಜಯ ಸಿಗುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪೋಷಕರು ಕೂಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಉತ್ತಮ ಗುಣ-ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಅವರ ಆಸಕ್ತಿಯ ಕ್ಷೇತ್ರ ಗುರುತಿಸಿ, ಪ್ರತಿಭೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, 'ಬಡ ಮಕ್ಕಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಜನ ಸಂಘದ ಅಧ್ಯಕ್ಷ ಆಫ್ತಾ ಪರ್ವೀಜ್ ಮಾತನಾಡಿ, ಜೀವನದಲ್ಲಿ ಪರಿಶ್ರಮವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದುದಾಗಿದ್ದು, ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಬೇಕು. ಶಿಕ್ಷಣದಿಂದ ಸಮಾಜ, ದೇಶದ ಪ್ರಗತಿ ಸಾಧ್ಯವಾಗಲಿದೆ. ಹಾಗೆಯೇ ಬಡತನ ಮೆಟ್ಟಿ ನಿಲ್ಲಬಹುದಾಗಿದೆ ಎಂಬುವುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಬಡತನದ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಈ ಉದ್ದೇಶದಿಂದ ಬಡ ಮಕ್ಕಳಿಗೆ ಸಂಘದವತಿಯಿಂದ ಉಚಿತವಾಗಿ ಬ್ಯಾಗ್ ಹಾಗೂ ನೋಟ್‍ಬುಕ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಕಾರ್ಪೋರೇಟರ್ ಆಸೀಫ್, ಮುಖಂಡರಾದ ಮಹಮ್ಮದ್ ಸಾದತ್‍ವುಲ್ಲಾ, ಸತ್ತಾರ್‍ಬೇಗ್, ಮುನ್ನು, ಹಬೀಬುಲ್ಲಾ, ಗೌಸ್, ರಿಜ್ವಾನ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







