ಸಂಶೋಧನಾ ಕ್ಷೇತ್ರದಿಂದ ಸಾಮಾಜಿಕ ವಿಕಾಸ: ಪ್ರೊ. ಕೆ. ಬೈರಪ್ಪ

ಮಂಗಳೂರು, ಜು.16: ಸಂಶೋಧನಾ ಕ್ಷೇತ್ರದಿಂದ ಸಾಮಾಜಿಕವಾಗಿ ವಿಕಾಸ ಸಾಧ್ಯವಾದ್ದರಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತಮ್ನನ್ನು ತೊಡಗಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ. ಬೈರಪ್ಪ ಕರೆ ನೀಡಿದ್ದಾರೆ.
ಅವರು ಇಂದು ಕೆನರಾ ಪದವಿ ಕಾಲೇಜಿನಲ್ಲಿ ಭಾನುವಾರ ನಡೆದ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರ ಸಂಘಟನೆ (ಅಮುಕ್ತ್)ಯ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
2014ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ 340 ಮಂದಿ ಸಂಶೋಧನಾ ವಿದ್ಯಾರ್ಥಿಗಳಿದ್ದರು. ಪ್ರಸ್ತುತ 1,050 ಮಂದಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ವರ್ಷದ ವೇಳೆಗೆ 1300 ಮಂದಿ ಸಂಶೋಧನಾ ವಿದ್ಯಾರ್ಥಿಗಳು ವಿವಿಯಲ್ಲಿ ತಮ್ಮ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ನಿವೃತ್ತಿಯ ಬಳಿಕ ಶಿಕ್ಷಕರು ಸುಮ್ಮನಾಗಬಾರದು. ತಮ್ಮಲ್ಲಿರುವ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಪ್ರವೃತ್ತಿಯನ್ನು ಮುಂದುವರಿಸಬೇಕು. ಇದಕ್ಕಾಗಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಕಾಯಕವನ್ನು ಮುಂದುವರಿಸಬೇಕು. ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕೂ ಎಂದು ಅವರು ಹೇಳಿದರು.
ಪಿಎಚ್‌ಡಿ ಅಧ್ಯಯನ ನಡೆಸಿ, ಪದವಿ ಕಾಲೇಜುಗಳಲ್ಲಿ ಪಾಠ ಮಾಡವ ಉಪನ್ಯಾಸಕರಿಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಅವಕಾಶ ದೊರೆಯಬೇಕು. ಯುಜಿಸಿ ನಿಯಮಗಳ ಪ್ರಕಾರ ಸ್ನಾತಕೋತ್ತರ ಪದವಿಗಳಿಗೆ ಪಾಠ ಮಾಡುವವರಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ. ಆದರೆ ಪದವಿ ಕಾಲೇಜಿನ ಉಪನ್ಯಾಸಕರು, ಕೆಲವು ಗಂಟೆಗಳ ಕಾಲ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವ ಅವಕಾಶ ಪಡೆಯುತ್ತಾರೆ. ಪಿಎಚ್‌ಡಿ ಹೊಂದಿರುವ ಇಂತಹ ಉಪನ್ಯಾಸಕರಿಗೆ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುವ ಅವಕಾಶವನ್ನು ಕಾಲೇಜು ಆಡಳಿತ ಮಂಡಳಿ ಕಲ್ಪಿಸಬೇಕು ಎಂದು ಪ್ರೊ. ಬೈರಪ್ಪ ಸಲಹೆ ನೀಡಿದರು.
ಕರ್ನಾಟಕದಲ್ಲಿ ಪಿಎಚ್. ಡಿ ನಿಯಮಾವಳಿ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಈ ಅಭಿಪ್ರಾಯವ್ನನು ತಾನು ವ್ಯಕ್ತಪಡಿಸಿದ್ದಾಗಿಯೂ ಅವರು ಈ ಸಂದರ್ಭ ತಿಳಿಸಿದರು.
ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿರುವ ಕೆನರಾ ಹೈಸ್ಕೂಲ್ ಸಂಘಟನೆಯ ಪದಾಧಿಕಾರಿ ಎಂ. ವಾಮನ್ ಕಾಮತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಾಯೋಗಿಕ ಜ್ಞಾನ ನೀಡಬೇಾದ ಅಗತ್ಯವಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಡಾ. ಮಾಲಿನಿ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಅಮುಕ್ತ್‌ನ ವಾರ್ಷಿಕ ಸಂಚಿಕೆಯನ್ನು ಕುಲಪತಿ ಪ್ರೊ. ಕೆ. ಬೈರಪ್ಪ ಅನಾವರಣಗೊಳಿಸಿದರು. ಅಮುಕ್ತ್ ಅಧ್ಯಕ್ಷ ಡಾ. ಉಮ್ಮಪ್ಪ ಪೂಜಾರಿ ಪಿ. ಸ್ವಾಗತಿಸಿದರು. ಡಾ. ಬಿ. ಕುಮಾರ್ ಹೆಗ್ಡೆ, ಡಾ. ನಾರ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.







