ಯುಪಿಎಸ್‍ಸಿ ಪರೀಕ್ಷೆ ಸಾಧಕ ಟಿ.ಎಸ್.ದಿವಾಕರ್‍ಗೆ ಸನ್ಮಾನ

ತುಮಕೂರು.ಜು.16:ಸತತ ಪರಿಶ್ರಮ ಮತ್ತು ಚಲದಿಂದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಿರುವ ತಿಪಟೂರಿನ ಟಿ.ಎಸ್.ದಿವಾಕರ್ ನಾಯಕ ಸಮುದಾಯದ ಎಲ್ಲಾ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಹೊರಪ್ಭೆಟೆಯ ಶ್ರೀಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದಲ್ಲಿ 2016ನೇ ಸಾಲಿನ ಯುಪಿಎಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಐಎಎಸ್ ಅಧಿಕಾರಿಯಾಗಿರುವ ತಿಪಟೂರಿನ ವಿಳ್ಳದೆಲೆ ವ್ಯಾಪಾರಿಗಳಾಗಿರುವ ಶಿವಣ್ಣ ಮತ್ತು ಪ್ರೇಮ ದಂಪತಿಗಳ ಪುತ್ರ ಟಿ.ಎಸ್.ದಿವಾಕರ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಬಡ ಕುಟುಂಬದಲ್ಲಿ ಹುಟ್ಟಿ,ಸರಕಾರಿ ಶಾಲೆಯಲ್ಲಿ ಕಲಿತು,ಲಕ್ಷಾಂತರ ರೂ ವೇತನ ಪಡೆಯುತ್ತಿದ್ದ ವಿದೇಶಿ ಉದ್ಯೋಗ ಬಿಟ್ಟು, ದೇಶಕ್ಕೆ ಏನಾದರೂ ಮಾಡಬೇಕೆಂಬ ಚಲದಿಂದ ಐಎಎಸ್ ಪರೀಕ್ಷೆ ಬರೆದು,ಅದರಲ್ಲಿ ಯಶಸ್ಸು ಕಂಡಿರುವ ದಿವಾಕರ್ ಸಾಧನೆ ನಿಜಕ್ಕೂ ಆಸಾಧಾರಣ ಎಂದು ಪ್ರಶಂಶಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೇಶ ವಿದೇಶಗಳ ಆಗು ಹೋಗುಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಜ್ಞಾನ ಅಗತ್ಯ.ಹಾಗೆಂದು ಕನ್ನಡವನ್ನು ನಿರ್ಲಕ್ಷಿಸುವಂತಿಲ್ಲ.ಆದರೆ ಜಾಗತಿಕ ಸ್ಪರ್ಧೆಯನ್ನು ಎದುರಿಸಲು, ಜಾಗತಿಕ ವಿದ್ವತ್ ಕಲಿಸಲು ಇಂಗ್ಲಿಷ್ ಭಾಷೆಯ ಅಗತ್ಯವಿದೆ ಎಂದ ಅವರು,ದೂರದರ್ಶನದಲ್ಲಿ ಬರುವ ಹಾಡು, ಆಸೆಗಳಿಗಿಂತ ಸುದ್ದಿ, ಚರ್ಚೆಗಳಿಗೆ ಹೆಚ್ಚು ಒತ್ತು ನೀಡಿ, ಇದರಿಂದ ನಿಮ್ಮ ಜ್ಞಾನ ವೃದ್ದಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಣ್ಣ ಕುಟುಂಬದಲ್ಲಿ ಹುಟ್ಟಿ ನಿರೀಕ್ಷೆಗೂ ಮೀರಿದ ರಾಜಕೀಯ ಅಧಿಕಾರ ಪಡೆಯಲು ನಿರಂತರ ಪರಿಶ್ರಮ ಕಾರಣ. ಅದೇ ರೀತಿ ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪರಿಶ್ರಮ ಅಗತ್ಯವಿದೆ.ಛಲದಿಂದ ಆಸಾಧಾರಣ ಸಾಧನೆ ಮಾಡಿರುವ ಟಿ.ಎಸ್.ದಿವಾಕರ್ ಬಡವರ ಪರವಾಗಿ ಕಾನೂನು ರೀತಿ ಕೆಲಸ ಮಾಡಲಿ ಎಂಬ ಆಶ್ರಯವನ್ನು ಶಾಸಕ ಕೆ.ಎನ್.ರಾಜಣ್ಣ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯುಪಿಎಸ್‍ಸಿ ಸಾಧಕ ಟಿ.ಎಸ್.ನಿರಂಜನ್, ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಬೆಳೆದ ನನಗೆ ನನ್ನ ತಂದೆ ತಾಯಿಯೇ ಸ್ಪೂರ್ತಿ, ದಿನದ ಬಹುಕಾಲ ಮನೆಯ ಹೊರಗೆ ದುಡಿಮೆಯಲ್ಲಿಯೇ ಇರುತ್ತಿದ್ದ ಪೋಷಕರು,ನನ್ನ ಸಾಧನೆಗೆ ಬೆಂಬಲವಾಗಿ ನಿಂತರು.ವಿದೇಶದಲ್ಲಿ ಸಾವಿರಾರು ವೇತನ ಬಿಟ್ಟು ವಾಪಸ್ಸ್ ಭಾರತಕ್ಕೆ ಬರುತ್ತೇನೆ ಎಂದಾಗಲೂ ಮರು ಮಾತನಾಡದೆ,ನನ್ನ ಇಚ್ಚೆಯಂತೆ ನಡೆದುಕೊಂಡರು.2010ರಲ್ಲಿ ಇಂಜಿನಿಯರಿಂಗ್ ಮುಗಿಸಿ ಎರಡುವರೆ ವರ್ಷ ಅಮೇರಿಕಾದಲ್ಲಿ ಕಂಪ್ಯೂಟರ್ ಇಂಜಿನಿಯರ್ ಕೆಲಸ ಬಿಟ್ಟು ಐಎಎಸ್ ಮಾಡಬೇಕೆಂದು 2015ರಲ್ಲಿ ಒಮ್ಮೆ ಪರೀಕ್ಷೆ ಬರೆದು ಕೂದಲೆಳೆಯ ಅಂತರದಲ್ಲಿ ಐಎಎಸ್ ತಪ್ಪಿದ್ದು, 2016ರಲ್ಲಿ 600ನೇ ರ್ಯಾಂಕ್ ಪಡೆದು, ಐಎಎಸ್ ಅಧಿಕಾರಿಯಾಗಿ ತೇರ್ಗಡೆಯಾಗಿದ್ದೇನೆ. ನಿರಂತರ ಪರಿಶ್ರಮ ಮತ್ತು ಚಲ ಹಾಗೂ ಪೋಷಕರು ಬೆಂಬಲ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.ಯಾವುದೇ ವಿಶೇಷ ತರಗತಿಗಳಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಅಂದಿನ ದಿನಪತ್ರಿಕೆ,ಮತ್ತು ಪೂರಕ ವಿಷಯಗಳಲ್ಲಿ ನಿರಂತರ ಜ್ಞಾನ ಸಂಪಾದನೆಯೇ ಆರ್ಹತೆ ಗಳಿಸಲು ಸಾಧ್ಯವಾಯಿತು ಎಂದರು.
ಯುಪಿಎ ಪರೀಕ್ಷೆ ಪಾಸು ಮಾಡಲು ಹಣ ಬೇಕು ಎಂಬುದು ತಪ್ಪು ಕಲ್ಪನೆ, ನನ್ನ ಎರಡು ವರ್ಷದ ಪರೀಕ್ಷೆಗೆ ಖರ್ಚಾಗಿರುವುದು ಕೇವಲ 1200 ರೂ ಮಾತ್ರ.ಐಎಎಸ್ ಕೇಳುವುದು ಮೇಧಾವಿಗಳು, ವಿಜ್ಞಾನಿಗಳನ್ನಲ್ಲ. ವಿಚಾರವಚಿತರು, ಒಂದು ಸಮಸ್ಯೆಯ ಕುರಿತು ಅವರಿಗಿರುವ ಅಪರಿಮಿತ ಜ್ಞಾನ ಮತ್ತು ಅದರ ಪರಿಹಾರಕ್ಕೆ ಅವರ ಬಳಿ ಇರುವ ಚಿಂತನೆಗಳೇನು ಎಂಬುದು ಪ್ರಮುಖವಾಗುತ್ತವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ನಿವೃತ್ತ ಅಧಿಕಾರಿ ಮೃತ್ಯಂಜಯಪ್ಪ ಮಾತನಾಡಿ, ಇದುವರೆಗೂ ಬೇರೆ ಸಮುದಾಯದವರನ್ನು ಕರೆದು ಅಭಿನಂದಿಸುತ್ತಿದ್ದ ನಮಗೆ ಇಂದು ನಮ್ಮವರೇ ಆದ ಟಿ.ಎಸ್.ದಿವಾಕರ್ ಅವರನ್ನು ಅಭಿನಂದಿಸುತ್ತಿರುವುದು ಸಂತೋಷದ ವಿಚಾರ.ನಿಮ್ಮ ಸೇವಾ ಅವಧಿಯಲ್ಲಿ ಕಾನೂನು ಮೀರಿ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು,ಐಎಎಸ್ ಎಂಬುದು ಸುಲಭದ ಮಾತಲ್ಲ. ಬಡತನದಲ್ಲಿ ಹುಟ್ಟಿ, ಸರಕಾರಿ ಶಾಲೆಯಲ್ಲಿ ಓದಿ ಕಠಿಣ ಪರಿಶ್ರಮದಿಂದ ಇಂದು ನಮ್ಮ ನಾಡಿಗೆ ಕೀರ್ತಿ ತಂದಿರುವ ಟಿ.ಎಸ್.ದಿವಾಕರ್ ನಮ್ಮೆಲ್ಲರಿಗೂ ಮಾದರಿ ಎಂದರು
ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಾಧಿಕಾರಿ ಕೆ.ಆರ್.ರಾಜಕುಮಾರ್ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಟಿ.ಎಸ್.ದಿವಾಕರ್ ಅವರ ತಂದೆ ಶಿವಣ್ಣ, ತಾಯಿ ಪ್ರೇಮ, ಮುಖಂಡರಾದ ಬಿ.ಜಿ.ಕೃಷ್ಣಪ್ಪ, ಕೃಷ್ಣಮೂರ್ತಿ, ಟಿ.ಬಿ.ಮಲ್ಲೇಶ್, ಕಲಾವಿದರಾದ ಹನುಮಂತೇಗೌಡ,ಶಿವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







