ಹಿಂದಿ ಹೇರಿಕೆ ವಿರುದ್ಧ ಒಮ್ಮತದ ಹೋರಾಟ ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಜು.16: ಕೇಂದ್ರ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಮ್ಮತದ ಹೋರಾಟ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಶಿಸಿದರು.
ರವಿವಾರ ಮೈಕೋ ಕನ್ನಡ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದ ಬಾಷ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಸಂಸ್ಕೃತಿ ಕಲರವ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಧಕ್ಕೆ ತರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಗ್ಗೆ ಎಚ್ಚರಿಕೆ ಇಂದಿರಬೇಕು ಎಂದು ತಿಳಿಸಿದರು.
ಕೇಂದ್ರ ಸರಕಾರ ಪ್ರಜಾಪ್ರಭುತ್ವದಡಿ ಅಧಿಕಾರಕ್ಕೆ ಬಂದು ಹಿಟ್ಲರ್ ಮಾದರಿಯ ಆಡಳಿತವನ್ನು ನಡೆಸುತ್ತಿದೆ. ಇದು ಜನತೆಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ. ಈ ಬಗ್ಗೆ ಜನತೆ ಅರ್ಥ ಮಾಡಿಕೊಂಡು ಜನ ವಿರೋಧಿ ನೀತಿಗಳ ವಿರುದ್ಧ ಒಮ್ಮತದಿಂದ ಹೋರಾಟವನ್ನು ರೂಪಿಸಬೇಕಾಗಿದೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಕ್ರೀಡೋತ್ಸವ ಅಗತ್ಯ: ಇಂದಿನ ಜಾಗತೀಕರಣದ ಯುಗದಲ್ಲಿ ಹಳ್ಳಿಗಳ ಜೀವನ ಶೈಲಿ ನಶಿಸುತ್ತಿದೆ. ಹಳ್ಳಿಗಳ ಜೀವನವೆಂದರೆ ಪ್ರಕೃತಿ ಮಡಿಲಲ್ಲಿ ಬದುಕುವುದೆಂದೇ ಅರ್ಥ. ಅದು ಆಟವಾಗಿರುವ ಕೃಷಿಯಾಗಿರಲಿ ಪರಿಸರಕ್ಕೆ ಪೂರಕವಾಗಿಯೇ ಇರುತ್ತವೆ. ಹೀಗಾಗಿ ಗ್ರಾಮೀಣ ಬದುಕಿನ ಸಾರವನ್ನು ಮುಂದಿನ ತಲೆಮಾರಿಗೂ ಜೀವಂತವಾಗಿಡುವುದು ನಮ್ಮ ಕರ್ತವ್ಯವೆಂದು ಅವರು ಹೇಳಿದರು.
ರಾಜ್ಯದಲ್ಲಿರುವ ಅಂತಾರಾಷ್ಟ್ರೀಯ ಕಂಪೆನಿಗಳಲ್ಲೂ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕು. ಅದು ಕಂಪೆನಿಯಾಗಲಿ, ವ್ಯಕ್ತಿಯಾಗಲಿ ಕನ್ನಡ ನಾಡಲ್ಲಿ ನೆಲೆಸಿದ್ದರೆ ಕನ್ನಡ ನಾಡು, ನುಡಿಗೆ ಹಾಗೂ ಇಲ್ಲಿನ ಜನತೆಗೆ ಮೊದಲ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲ ಕಂಪೆನಿಗಳಲ್ಲಿ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಮಾಯಣ್ಣ, ಮೈಕೋ ಕನ್ನಡ ಬಳಗದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾ.ಶಿ.ರಾಜು, ಭಾಷ್ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಎಚ್.ಎಸ್.ರಮೇಶ್ ಮತ್ತಿತರರಿದ್ದರು.







