ಗಾಯತ್ರಿ ನಾವಡಗೆ ಎಚ್.ಎಸ್.ಪಾರ್ವತಿ ಪ್ರಶಸ್ತಿ
ಬೆಂಗಳೂರು, ಜು.16: ದೃಶ್ಯ ಹಾಗೂ ಶ್ರವ್ಯ ಮೂಲಕ ಬಹುಮುಖಿ ಅಧ್ಯಯನಕ್ಕೆ ಒಳಗಾದ ಕಾಡ್ಯನಾಟ ಕೃತಿ ರಚಿಸಿದ ಡಾ.ಗಾಯತ್ರಿ ನಾವಡರಿಗೆ ಎಚ್.ಎಸ್.ಪಾರ್ವತಿ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ ಎಂದು ಪ್ರೊ.ಸಿ.ಎನ್.ರಾಮಚಂದ್ರನ್ ತಿಳಿಸಿದ್ದಾರೆ.
ರವಿವಾರ ಕರ್ನಾಟಕ ಲೇಖಕಿಯರ ಸಂಘ ನಗರದ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಎಚ್.ಎಸ್.ಪಾರ್ವತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಜಾನಪದ ಕ್ಷೇತ್ರದಲ್ಲಿ ತಮ್ಮದೇ ಅಧ್ಯಯನ ನಡೆಸಿರುವ ಡಾ.ಗಾಯತ್ರಿ ನಾವಡ ‘ಕಾಡ್ಯನಾಟ’ಜಾನಪದ ಕೃತಿಯನ್ನು ರಚಿಸಿದ್ದರು. ಆ ಸಂದರ್ಭದಲ್ಲಿ ಕಾಡ್ಯನಾಟ ಎಂಬುದು ಜಾನಪದ ಸಂಸ್ಕೃತಿಯೇ ಇಲ್ಲವೆಂದು ಹಲವರು ಟೀಕೆ ಮಾಡಿದ್ದರು. ಆ ಸಂದರ್ಭದಲ್ಲಿ ಹಿರಿಯ ಸಾಹಿತಿ ಶಿವರಾಮ ಕಾರಂತರು ಕಾಡ್ಯನಾಟ ಆಚರಣೆ ಇರುವುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಅವರು ಸ್ಮರಿಸಿದರು.
ಹಿರಿಯ ಸಾಹಿತಿ ಗಾಯತ್ರಿ ನಾವಡ ಕರಾವಳಿ ಜಾನಪದ ಸಾಹಿತ್ಯದಲ್ಲಿ ಸ್ತ್ರೀನೆಲೆಗಳು ಹಾಗೂ ತಾತ್ವಿಕ ನೆಲೆಯಲ್ಲಿ ಸ್ತ್ರೀವಾದದ ಚಿಂತನೆಗಳ ಕುರಿತು ಕ್ರೀಯಾಶೀಲರಾಗಿ ಭಾಗಿಯಾಗಿದ್ದರು. ಆದರೂ ಆಕಾಡೆಮಿ ನೆಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆಯದಿದ್ದ ಕಾರಣ ಬೇಸರ ಹೊಂದಿದ್ದರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ, ಹಾಗೂ ಹೇಮಲತಾ ಮಹಿಷಿ, ಡಾ.ಎಂ.ಎಸ್.ವಿದ್ಯಾ, ಆಶಾ ಹೆಗಡೆ ಮತ್ತಿತರರಿದ್ದರು.







