ಬಳ್ಳಾರಿ ಜಿಲ್ಲೆಗೆ 10 ಸಾವಿರ ಮನೆಗಳ ಮಂಜೂರು: ಸಚಿವ ಸಂತೋಷ ಲಾಡ್

ಬಳ್ಳಾರಿ, ಜು.16: ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 10 ಸಾವಿರ ಮನೆಗಳನ್ನು ಬಳ್ಳಾರಿ ಜಿಲ್ಲೆಗೆ ರಾಜ್ಯ ಸರಕಾರ ಮಂಜೂರು ಮಾಡಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಬಳ್ಳಾರಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ರವಿವಾರ ವಿವಿಧ ವಸತಿ ಯೋಜನೆ ಅಡಿ ಆಯ್ಕೆಯಾದ 1344 ಫಲಾನುಭವಿಗಳಿಗೆ ಬ್ಯಾಂಕಿಂಗ್ ನಿಂದ ಸಾಲ ಮಂಜೂರಾತಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಗೆ ಮಂಜೂರಾಗಿರುವ ಈ ಮನೆಗಳಿಗೆ ಅರ್ಹ ಫಲಾನುಭವಿಗಳನ್ನು ಶೀಘ್ರ ಆಯ್ಕೆ ಮಾಡಿ ಮುಂದಿನ ತಿಂಗಳು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಂದ ವಸತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಪಟ್ಟಾ(ಹಕ್ಕುಪತ್ರ)ವಿಲ್ಲದೇ ಪರದಾಡುತ್ತಿದ್ದ ಬಳ್ಳಾರಿ ಜಿಲ್ಲೆಯ 12 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಸಹ ವಿತರಿಸಲಾಗುವುದು.
10 ಸಾವಿರ ಕೋಟಿ ರೂ.ಗಳ ರೈತರ ಸಾಲವನ್ನು ಮನ್ನಾ ಮಾಡುವುದರ ಮೂಲಕ ಬರದಿಂದ ತತ್ತರಿಸಿ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ನಮ್ಮ ಸರಕಾರ ಧಾವಿಸಿದೆ. ಎಸ್ಸಿ, ಎಸ್ಟಿ ಜನರ ಕಲ್ಯಾಣ್ಕಕಾಗಿ ಪ್ರತಿ ವರ್ಷ 21 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.





