ಬೆಳೆವಿಮೆ ಯೋಜನೆಯಲ್ಲಿ ಬ್ಯಾಂಕು ಮತ್ತು ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ರೈತರಿಗೆ ಸಂಕಷ್ಟ: ಆರೋಪ

ಕೆ.ಆರ್.ಮಹೇಶ್ ಓಡೆಯರ್
ಕಡೂರು, ಜು. 16: ಬೆಳೆವಿಮೆ ಯೋಜನೆಯಲ್ಲಿ ಕಂದಾಯ ಇಲಾಖೆ ಮತ್ತು ಬ್ಯಾಂಕುಗಳ ನಡುವೆ ಸಮನ್ವಯತೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಜಿಪಂ ಸದಸ್ಯ ಕೆ.ಆರ್.ಮಹೇಶ್ ಓಡೆಯರ್ ಆರೋಪಿಸಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ ನಾಲ್ಕು ವರ್ಷಗಳಿಂದ ತಾಲ್ಲೂಕು ತೀವ್ರ ಬರದಿಂದ ತತ್ತರಿಸುತ್ತಿದೆ. ಸರ್ಕಾರ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಯೋಜನೆಯನ್ನು ಜಾರಿ ಮಾಡಿದ್ದರೂ ರೈತರು ಈ ಯೋಜನೆಗಳ ಸವಲತ್ತು ಪಡೆಯುವಲ್ಲಿ ಹೆಣಗಾಡುತ್ತಿದ್ದಾರೆ ಎಂದರು.
ಬೆಳೆವಿಮೆ ಮಾಡಿಸಲು ರೈತರ ಬಳಿ ಬಿಡಿಗಾಸೂ ಇಲ್ಲ ಮುಂಗಾರು-ಹಿಂಗಾರು ಎರಡೂ ಮಳೆಗಳು ಕೈಕೊಟ್ಟು ರೈತರ ಪರಿಸ್ಥಿತಿ ಹದಗೆಟ್ಟಿದೆ. ತುತ್ತು ಅನ್ನಕ್ಕೆ ರೈತನೇ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರವೇ ತಾಲ್ಲೂಕಿನ ರೈತರ ಬೆಳೆವಿಮೆ ಕಂತುಗಳನ್ನು ಕಟ್ಟಿಕೊಡಲಿ ಎಂದು ಒತ್ತಾಯಿಸಿದರು.
ಇನ್ನು ಬ್ಯಾಂಕುಗಳಲ್ಲಿ ರೈತರ ಸಾಲ ಇದ್ದರೆ ಇನ್ನಷ್ಟು ತೊಂದರೆಯನ್ನು ಅನುಭವಿಸಬೇಕಾಗಿದೆ. ರೈತ ಬೆಳೆದ ಅಲ್ಪಸ್ವಲ್ಪ ಬೆಳೆಗಳ ಅಥವಾ ಉದ್ಯೋಗಖಾತ್ರಿ ಯೋಜನೆಯಲ್ಲಿ ದುಡಿದ ಹಣವನ್ನು ಬ್ಯಾಂಕುಗಳಿಗೆ ತುಂಬಲು ಹೋದರೆ ಬ್ಯಾಂಕಿನ ಸಿಬ್ಬಂದಿ ರೈತರ ಸಾಲದ ಅಥವಾ ಬಡ್ಡಿಯ ಬಾಬತ್ತಿಗೆ ತುಂಬಿಕೊಳ್ಳುತ್ತೇವೆ ಎಂದು ಬಹುತೇಕ ಬ್ಯಾಂಕುಗಳಲ್ಲಿ ಪರೋಕ್ಷವಾಗಿ ರೈತರಿಗೆ ತೊಂದರೆ ಒಡ್ಡುತ್ತಿದ್ದಾರೆ ಎಂದು ದೂರಿದರು.
ವಿಪರ್ಯಾಸದ ಸಂಗತಿಯೆಂದರೆ ಬೆಳವಿಮೆ ಸಂಬಂಧ ಬ್ಯಾಂಕುಗಳು ರೈತರ ಬಳಿ ಗಣಕೀಕೃತ ದೃಢೀಕರಣ ಪತ್ರವನ್ನು ಕೋರುತ್ತಿವೆ. ಆದರೆ 2016-17ನೇ ಸಾಲಿನ ಪಹಣಿಗಳಲ್ಲಿ ಬೆಳೆ ನೊಂದಣಿಯಾಗಿಲ್ಲ. ನೊಂದಣಿ ಮಾಡಬೇಕಾದ ಕಂದಾಯ ಇಲಾಖೆ ನಿದ್ರೆಯಲ್ಲಿದೆ, ಕೈಬರಹದ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆ ಕೊಟ್ಟರೆ ಅದನ್ನು ಸ್ವೀಕರಿಸಲು ಬ್ಯಾಂಕುಗಳು ಸಿದ್ದವಿಲ್ಲ. ರೈತರ ಸ್ವಯಂ ಘೋಷಣಾ ಪತ್ರವನ್ನಾದರೂ ಸ್ವೀಕರಿಸಲು ಬ್ಯಾಂಕುಗಳಿಗೆ ಇಷ್ಟವಿಲ್ಲ. ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ ರೈತನ ಬದುಕು ಎಂದರು.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗಿದೆ, ಬೆಳೆವಿಮೆ ಸಂಬಂಧಪಟ್ಟಂತೆ ಕಾಯ್ದೆಗಳನ್ನು ಸುಧಾರಣೆ ಮಾಡಬೇಕಾಗಿದೆ. ಇತ್ತ ವಿಮೆ ಕೊಟ್ಟ ಹಾಗೆ ಮಾಡಿ ಅತ್ತ ಕಿತ್ತುಕೊಳ್ಳುವ ನೀತಿಯಲ್ಲಿ ಸರ್ಕಾರ ಮುಂದುವರೆದಿರುವುದು ದುರದೃಷ್ಟಕರ. ರೈತ ತಾನು ಬೆಳೆದ ಬೆಳೆಯನ್ನು ಸ್ವಯಂ ಘೋಷಣೆ ಮಾಡಿಕೊಂಡು ವಿಮೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಅಂದಾಜು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿದೆ, ಇದರಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದ ತೆಂಗು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಶೇ. 33 ರಷ್ಟು ಬೆಳೆ ನಷ್ಟದ ಕೆಟ್ಟ ಪರಿಸ್ಥಿತಿಯಲ್ಲಿ ತಾಲ್ಲೂಕಿನ ರೈತರಿದ್ದಾರೆ ಇಂತಹ ಸ್ಥಿತಿಯಲ್ಲಿ ಸರ್ಕಾರದ ಒಂದೇ ಒಂದು ಸಾಧನೆ ಎಂದರೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಮೂಲಕ ತಾಲ್ಲೂಕಿನ 32 ಕೆರೆಗಳಿಗೆ ನೀರು ಕಾಣಿಸುವುದು ಈ ಯೋಜನೆ ಪೂರ್ಣವಾದರೆ ಬರ ಪ್ರದೇಶದ ತಾಲ್ಲೂಕಿನ ರೈತರು ಕನಿಷ್ಟ ಸುಧಾರಣೆಗೆ ಬರುತ್ತಾರೆ ಎಂದು ಹೇಳಿದರು.







