ಗಂಗಾ ಶುದ್ಧೀಕರಣ ಕಾನೂನು ಸಮಿತಿಯಿಂದ ಎರಡು ಹೊಸ ಮಂಡಳಿಗಳ ರಚನೆಗೆ ಪ್ರಸ್ತಾವ

ಹೊಸದಿಲ್ಲಿ,ಜು.16: ಗಂಗಾ ಶುದ್ಧೀಕರಣ ಕುರಿತು ಕರಡು ಕಾನೂನನ್ನು ರೂಪಿಸುತ್ತಿ ರುವ ಅಧಿಕೃತ ಸಮಿತಿಯು ನಮಾಮಿ ಗಂಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿ ರುವ ಈಗಿನ ಎರಡು ಮಂಡಳಿಗಳ ಬದಲು ಹೊಸ ಮಂಡಳಿಗಳನ್ನು ರಚಿಸಲು ಎರಡು ಹಂತಗಳ ಪ್ರಕ್ರಿಯೆಯೊಂದನ್ನು ಪ್ರಸ್ತಾಪಿಸಿದೆ.
ಈ ಕರಡು ಶಾಸನವು ಜಾರಿಗೊಂಡರೆ ಅದು ದೇಶದಲ್ಲಿ ನದಿಗೆ ಸಂಬಂಧಿಸಿದಂತೆ ಮೊದಲ ಕಾನೂನು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈಗಿರುವ ಗಂಗಾ ರಾಷ್ಟ್ರೀಯ ಮಂಡಳಿ(ಎನ್‌ಸಿಜಿ)ಯ ಬದಲು ಪ್ರಧಾನಿಯವರ ಪದನಿಮಿತ್ತ ಅಧ್ಯಕ್ಷತೆಯಲ್ಲಿ ಸಮಗ್ರ ಅಭಿವೃದ್ಧಿ ಮಂಡಳಿ(ಐಡಿಸಿ)ಯನ್ನು ಸ್ಥಾಪಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಪ್ರಧಾನಿ ಎನ್‌ಸಿಜಿಯ ಅಧ್ಯಕ್ಷರು ಸಹ ಆಗಿದ್ದಾರೆ.
ಜೊತೆಗೆ ಶುದ್ಧ ಗಂಗಾ ರಾಷ್ಟ್ರೀಯ ಆಂದೋಲನ(ಎನ್‌ಎಂಸಿಜಿ)ದ ಬದಲು ಜಲ ಸಂಪನ್ಮೂಲಗಳ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರದೇಶ ನಿರ್ವಹಣಾ ನಿಗಮವನ್ನು ಸ್ಥಾಪಿಸುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.
ಪ್ರಸ್ತುತ ಎನ್‌ಸಿಜಿ ಮತ್ತು ಎನ್‌ಎಂಸಿಜಿ ನಮಾಮಿ ಗಂಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿವೆ.





