ಸರಕಾರ, ಸಿಐಡಿಗೆ ಹೈಕೋರ್ಟ್ ನೋಟಿಸ್
ಸಿ.ಎಂ.ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ

ಬೆಂಗಳೂರು, ಜು.16: ಪುತ್ತೂರಿನ ಸಿ.ಎಂ.ಶ್ಯಾಮ್ ಪ್ರಸಾದ್ ಶಾಸ್ತ್ರೀ ಆತ್ಮಹತ್ಯೆ ಪ್ರಕರಣದ ತನಿಖೆ ವಿಳಂಬಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತು ಸಿಐಡಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮೃತ ಶ್ಯಾಮ್ ಪ್ರಸಾದ್ ಶಾಸ್ತ್ರೀ ಅವರ ಪತ್ನಿ ಸಂಧ್ಯಾ ಲಕ್ಷ್ಮೀ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ ಮತ್ತು ತನಿಖಾಧಿಕಾರಿಯಾದ ಸಿಐಡಿ ಉಪ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಪ್ರಕರಣದ ತನಿಖೆಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸಿಐಡಿಗೆ ನ್ಯಾಯಪೀಠ ಇದೇ ವೇಳೆ ಮೌಖಿಕವಾಗಿ ಸೂಚಿಸಿತು.
ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರನ್ನು ಬ್ಲಾಕ್‌ಮೇಲ್ ಮಾಡಿದ ಆರೋಪ ಸಂಬಂಧ ರಾಮಕಥಾ ಗಾಯಕಿಯ ಪತಿಯ ದಿವಾಕರ ಶಾಸ್ತ್ರೀ ಅವರನ್ನು 2014ರ ಆಗಸ್ಟ್‌ನಲ್ಲಿ ಹೊನ್ನಾವರದ ಪೊಲೀಸರು ಬಂಧಿಸಿದ್ದರು. ಆದರೆ, ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರೀ ಅವರು 2014ರ ಆ.31ರಂದು ಪುತ್ತೂರಿನ ಕೆದಿಲ ಗ್ರಾಮದ ಬಡೆಕ್ಕಿಲದ ತಮ್ಮ ಮನೆಯಲ್ಲಿ ಮಧ್ಯಾಹ್ನ 2ಗಂಟೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರಿಂದ ಅಪರಿಚಿತರು ಬೆದರಿಕೆ ಕರೆ ಮಾಡಿದ್ದರಿಂದ ತಮ್ಮ ಪತಿ ಶ್ಯಾಮ್ ಪ್ರಸಾದ್ ಶಾಸ್ತ್ರೀ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪಿಸಿ ಪತ್ನಿ ಸಂಧ್ಯಾ ಲಕ್ಷ್ಮೀ ಪುತ್ತೂರು ಪೊಲೀಸರಿಗೆ ಅಂದೇ ದೂರು ನೀಡಿದ್ದರು. ನಂತರ ಸರಕಾರ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಹೈಕೋರ್ಟ್ ಮೆಟ್ಟಿಲೇರಿರುವ ಸಂಧ್ಯಾಲಕ್ಷ್ಮೀ ಅವರು, ತಮ್ಮ ಪತಿ ಶ್ಯಾಮ್ ಪ್ರಸಾದ್ ಶಾಸ್ತ್ರೀ ಆತ್ಮಹತ್ಯೆ ಮಾಡಿಕೊಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಆದರೆ, ಸಿಐಡಿ ತನಿಖಾಧಿಕಾರಿಗಳು ಇನ್ನು ತನಿಖೆ ಪೂರ್ಣಗೊಳಿಸಿಲ್ಲ. ಮೂರು ವರ್ಷದಿಂದ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಸಿಐಡಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.







