ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಲು ನಿರಾಕರಿಸಿದ ಹೈಕೋರ್ಟ್
ಸಿಬ್ಬಂದಿಗೆ ವೇತನ ಪರಿಷ್ಕೃತ ಶ್ರೇಣಿ ವಿಚಾರ

ಬೆಂಗಳೂರು, ಜು.16: ಹೈಕೋರ್ಟ್ ಸಿಬ್ಬಂದಿಗೆ ವೇತನ ಪರಿಷ್ಕೃತ ಶ್ರೇಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಲು ವಿಭಾಗೀಯ ಪೀಠ ನಿರಾಕರಿಸಿದೆ.
ಹೈಕೋರ್ಟ್ ನೌಕರರ ವೇತನ ಶ್ರೇಣಿ ಪರಿಷ್ಕರಣೆ ವಿಚಾರದಲ್ಲಿನ ನ್ಯಾಯಾಂಗ ನಿಂದನೆ ಕೈ ಬಿಡಬೇಕು ಎಂಬ ರಾಜ್ಯ ಸರಕಾರದ ಮನವಿಯನ್ನು ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿದೆ.
ಹೈಕೋರ್ಟ್ ನೌಕರರ ಕಾರ್ಯ ನಿರ್ವಹಣೆಯು ಸರಕಾರದ ಇತರೆ ಇಲಾಖೆಯ ನೌಕರರಿಗಿಂತ ವಿಭಿನ್ನವಾಗಿರುತ್ತದೆ. ಅವರ ಮೇಲೆ ಹೆಚ್ಚಿನ ಕಾರ್ಯದೊತ್ತಡ ಇರುತ್ತದೆ. ಪ್ರತಿ ಹೈಕೋರ್ಟ್ ಸಹ ತನ್ನ ನೌಕರರಿಗೆ ತನ್ನದೇ ಆದ ವೇತನ ಶ್ರೇಣಿ ಹೊಂದಿರಬೇಕು. ಅದರಂತೆ ಕರ್ನಾಟಕ ಹೈಕೊರ್ಟ್ ನೌಕರರ ವೇತನ ಶ್ರೇಣಿ ಪರಿಷ್ಕರಿಸುವಂತೆ 2004ರಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಶಿಫಾರಸನ್ನು ಸರಕಾರ ಜಾರಿ ಮಾಡಿರಲಿಲ್ಲ. ವೇತನ ಶ್ರೇಣಿ ಪರಿಷ್ಕರಿರಣೆ ಮಾಡುವಂತೆ ಸರಕಾರಕ್ಕೆ ಆದೇಶಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನೌಕರರ ಕ್ಷೇಮಾಭಿವೃದ್ಧಿ ಸಂಘವು ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಹೈಕೋರ್ಟ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ 2011ರ ಅ.12ರಂದು ಆದೇಶ ಮಾಡಿತ್ತು.ಈ ಆದೇಶ ಪಾಲನೆ ಮಾಡಿಲ್ಲ ಎಂದು ಸಂಘವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಗೆ ಮಧ್ಯಂತರ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರಕಾರವು, ಉದ್ದೇಶಪೂರ್ವಕವಾಗಿ ವೇತನ ಪರಿಷ್ಕರಣೆ ಆದೇಶ ಅನುಷ್ಠಾನ ಮಾಡುತ್ತಿಲ್ಲ. ಬದಲಾಗಿ ವಿಳಂಬವಾಗುತ್ತಿದೆ ಅಷ್ಟೇ. ಮೇಲಾಗಿ ನೌಕರರಿಗೆ ವೇತನ ಪರಿಷ್ಕೃತ ಮಾಡಬೇಕೆಂಬ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ ತೀರ್ಪಿತ್ತಿದೆ. ಆ ಆದೇಶದ ಪುನರ್ ಪರಿಶೀಲನೆಗೆ ಕೋರಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರಕಾರ ಚಿಂತಿಸುತ್ತಿದೆ. ಹೀಗಾಗಿ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈ ಬಿಡುವಂತೆ ಕೋರಿತು. ಸರಕಾರದ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.







