ಗಾಳಿ-ಬೆಳಕಿನಂತೆ ಭೂಮಿ ಎಲ್ಲರಿಗೂ ಸಿಗಲಿ: ಚೆನ್ನಮ್ಮ ಹಳ್ಳಿಕೆರೆ
ಬೆಂಗಳೂರು, ಜು. 16: ಜಗತ್ತಿನಲ್ಲಿರುವ ಎಲ್ಲರಿಗೂ ಗಾಳಿ-ಬೆಳಕು ಸಿಗುವಂತೆ ಸ್ವಾಭಿಮಾನದ ಬದುಕಿಗೆ ಪ್ರತಿಯೊಬ್ಬರಿಗೂ ಭೂಮಿಯ ಹಕ್ಕು ಸಿಗಬೇಕು ಎಂದು ಸ್ವಾತಂತ್ರ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೆರೆ ಅಭಿಪ್ರಾಯಿಸಿದ್ದಾರೆ.
ರವಿವಾರ ದೂರದರ್ಶನ ಕೇಂದ್ರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನೃತ್ಯಗೀತ ನಮನ-2017-ಕನ್ನಡ ದೇಶಭಕ್ತಿ ಗೀತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನತೆಯ ಮೂಲಭೂತ ಅಗತ್ಯಗಳಲ್ಲಿ ಭೂಮಿ ಅತಿಮುಖ್ಯವಾದುದ್ದೆಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಭೂಮಿ ಸಿಗಬೇಕೆಂದು ಒತ್ತಾಯಿಸಿ ಸಮಾಜ ಸುಧಾರಕ ವಿನೋಬಾ ಭಾವೆ ಸುಮಾರು 16ವರ್ಷ ದೇಶಾದ್ಯಂತ ಸುತ್ತಾಡಿದರು. ಅವರ ಜೊತೆಯಲ್ಲಿ ನಾನು ಆರು ವರ್ಷ ಸುತ್ತಾಡಿ ದೇಶದ ಆಗು ಹೋಗುಗಳನ್ನು ಪರಿಚಯಿಸಿಕೊಂಡೆ. ಈ ಹೋರಾಟದ ಫಲವಾಗಿ ಬಡಜನತೆಗೆ ಲಕ್ಷಾಂತರ ಎಕರೆ ದೊರಕುವಂತಾಯಿತು ಎಂದು ಅವರು ಸ್ಮರಿಸಿದರು.
ಜೈಲು ಅನುಭವವೇ ಸ್ಫೂರ್ತಿ: ನಮ್ಮದು ಸ್ವಾತಂತ್ರ ಹೋರಾಟಗಾರರ ಕುಟುಂಬ. ನನ್ನ ತಾಯಿ ಜೈಲಿಗೆ ಹೋಗುವಾಗ ನನಗೆ 2ವರ್ಷ. ಜೈಲಿನಲ್ಲಿದ್ದ ಹಿರಿಯ ಸ್ವಾತಂತ್ರ ಹೋರಾಟಗಾರರ ಜೀವನ ಗಾಥೆಯನ್ನು ಕೇಳುತ್ತಲೆ ಬೆಳೆದೆ. ಹೀಗಾಗಿ ನನ್ನ ಬದುಕಿಗೆ ಜೈಲಿನ ಅನುಭವವೇ ಸ್ಫೂರ್ತಿಯಾಯಿತು ಎಂದು ಅವರು ಹೇಳಿದರು.
ನನ್ನ ಇಡೀ ಬದುಕು ಕೇವಲ ದೇಶಕ್ಕೆ ಸಮರ್ಪಿತವೆಂದು 12ನೆ ವಯಸ್ಸಿನಲ್ಲಿ ನಿರ್ಧರಿಸಿದೆ. ಅಲ್ಲಿಂದ ಹಿರಿಯ ಸ್ವಾತಂತ್ರ ಹೋರಾಟಗಾರರ ಜೊತೆ ಬೆರೆತೆ. ವಿನೋಬಾ ಭಾವೆ ಜೊತೆಗಿನ ಒಡನಾಟ ನನ್ನ ಸಾಮಾಜಿಕ ಬದುಕಿನ ಸ್ಪಷ್ಟತೆ ಸಿಕ್ಕಿತು. ಅಲ್ಲಿಂದ ಇಲ್ಲಿಯವರೆಗೂ ಸಾಮಾಜಿಕ ಬದುಕು ಸಾಗುತ್ತಾ ಬರುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಾಡೋಜ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ಡಾ.ಮಹೇಶ್‌ಜೋಶಿ ಮತ್ತಿತರು ಹಾಜರಿದ್ದರು.







