ಲಂಚ ಆರೋಪ: ಮೋದಿ ವಿರುದ್ಧ ಸಿಬಿಐ ತನಿಖೆಗೆ ನ್ಯಾಯಾಲಯ ನಿರಾಕರಣೆ

ಹೊಸದಿಲ್ಲಿ,ಜು.16: ಸಚಿವಾಲಯದಲ್ಲಿನ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ನಿಷ್ಕ್ರಿಯತೆಯನ್ನು ಪ್ರದರ್ಶಿಸಿದ್ದು ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂಬ ಕೋರಿ ರಕ್ಷಣಾ ಇಲಾಖೆಯ ಉಚ್ಚಾಟಿತ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ತಳ್ಳಿಹಾಕಿದೆ.
ಅರ್ಜಿದಾರರ ಮನವಿಯು ವಿಚಾರಣೆಗೆ ಯೋಗ್ಯವಲ್ಲವೆಂದು ಅಭಿಪ್ರಾಯಿಸಿದ ವಿಶೇಷ ನ್ಯಾಯಾಧೀಶ ವಿರೇಂದ್ರ ಕುಮಾರ್ ಗೋಯಲ್, ಪ್ರಧಾನಿ ಲಂಚ ಸ್ವೀಕರಿಸಿರುವುದಾಗಲಿ ಅಥವಾ ಇನ್ನಾವುದೇ ಅಮೂಲ್ಯವಾದ ವಸ್ತುವನ್ನು ಉಡುಗೊರೆ ಯಾಗಿ ಪಡೆದಿರುವ ಬಗ್ಗೆ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲವೆಂದು ಹೇಳಿದ್ದಾರೆ.
ಅರ್ಜಿದಾರರಾದ ಕೆ.ಎನ್.ಮಂಜುನಾಥ್ ಅವರು ಈ ಮೊದಲು ರಕ್ಷಣಾ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಅಶಿಸ್ತಿನ ವರ್ತನೆಗೆ ಸಂಬಂಧಿಸಿ ಅವರನ್ನು ಸೇವೆಯಿಂದ ಉಚ್ಚಾಟಿಸಲಾಗಿತ್ತು.
ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿ ಮಂಜುನಾಥ್ ಸಲ್ಲಿಸಿದ ಮನವಿಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣವು ತಿರಸ್ಕರಿಸಿತ್ತು ಹಾಗೂ ಅವರ ಮಾನಸಿಕ ಸ್ಥಿಮಿತತೆಯನ್ನು ಪರೀಕ್ಷೆಗೊಳಪಡಿಸುವಂತೆ ಏಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಆದೇಶಿಸಿತ್ತು.
ರಕ್ಷಣಾ ಇಲಾಖೆ ಹಾಗೂ ತಾನು ನಿಯೋಜಿಸಲ್ಪಟ್ಟಿದ್ದ ವಾಯುಪಡೆಯ ಮುಖ್ಯ ಕಾರ್ಯಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಚಟುವಟಿಕೆಗಳ ಬಗ್ಗೆ ತಾನು ಪ್ರಧಾನಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ದೂರುದಾರ ಮಂಜುನಾಥ್ ಆರೋಪಿಸಿದ್ದರು. ಆದಾಗ್ಯೂ, ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳಲು ಪ್ರಧಾನಿ ವಿಫಲರಾಗಿದ್ದಾರೆಂದು ಮಂಜುನಾಥ್ ಆಪಾದಿಸಿದ್ದರು.







