ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು
.jpg)
ಕಲಬುರ್ಗಿ, ಜು.16: ಒಂದೇ ಕುಟುಂಬದ ನಾಲ್ವರು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ಸರಸ್ವತಿ ಗೋದಾಮು ಬಡಾವಣೆಯಲ್ಲಿ ನಡೆದಿದೆ.
ಶ್ರೀಕಾಂತ ಕಮಲಾಪುರಕರ್ (55), ಪತ್ನಿ ಧನುಶ್ರೀ (50), ಮಕ್ಕಳಾದ ಚೇತನ (21), ಸಾಕ್ಷಿ (16) ಮೃತಪಟ್ಟವರು. ಶುಕ್ರವಾರ ತಡರಾತ್ರಿ ಇಲ್ಲವೇ, ಶನಿವಾರ ಬೆಳಗಿನಜಾವ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಡೆತ್ ನೋಟ್: ತಾವು ಮೃತಪಟ್ಟ ಮೇಲೆ ತಮ್ಮ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಬಳಕೆಗೆ ಒಪ್ಪಿಸುವಂತೆ ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆಗೆ ಈಡಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತ ಸಂಬಂಧಿಗಳು ನೀಡುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಎನ್.ಶಶಿಕುಮಾರ ತಿಳಿಸಿದ್ದಾರೆ. ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಬ್ರಹ್ಮಪುರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಮೃತ ಶ್ರೀಕಾಂತ ಭೂಗರ್ಭ ಜಲ ಪರಿಶೋಧಕರಾಗಿ ಕಾರ್ಯನಿರ್ವಸುತ್ತಿದ್ದರು. ಇವರ ಪತ್ನಿ ಧನುಶ್ರೀ ಖಾಸಗಿ ಮಳಿಗೆಯೊಂದರಲ್ಲಿ ಅಕೌಂಟೆಂಟ್ ಕಮ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಮಗ ಚೇತನ ಬಿಕಾಂ ಹಾಗೂ ಮಗಳು ಸಾಕ್ಷಿ ಎಸೆಸೆಲ್ಸಿ ಮುಗಿಸಿದ್ದರು ಎಂದು ಎಸ್ಪಿ ಎನ್.ಶಶಿಕುಮಾರ ತಿಳಿಸಿದರು.







