ಹಾಸ್ಟೆಲ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ : ವಿದ್ಯಾರ್ಥಿಗಳ ಪ್ರತಿಭಟನೆ
.jpg)
ಹಾಸನ,ಜು.16: ಕಳಪೆ ಗುಣಮಟ್ಟದ ಆಹಾರವನ್ನು ಖಂಡಿಸಿ ಹಾಗೂ ಹಾಸ್ಟೆಲ್‍ಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಆಗ್ರಹಿಸಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಎಸ್.ಎಫ್.ಐ. ನೇತೃತ್ವದಲ್ಲಿ ರವಿವಾರ ಸಂಜೆ ಪ್ರತಿಭಟನೆ ನಡೆಸಿದರು.
ನಗರದ ಹಳೆ ಸರಕಾರಿ ಆಸ್ಪತ್ರೆ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಬಳಿ ಇರುವ ಮೆಟ್ರಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮಲಗಲು ಹಾಸಿಗೆ, ದಿಂಬು, ಹೊದಿಕೆ, ಸೊಳ್ಳೆ ಪರದೆಯನ್ನು ನೀಡಿರುವುದಿಲ್ಲ. ಒಂದು ರೂಂನಲ್ಲಿ ನಿರ್ಧಿಷ್ಟ ವಿದ್ಯಾರ್ಥಿಗಳು ಇರುವ ವ್ಯವಸ್ಥೆ ಮಾಡಿರುವುದಿಲ್ಲ. ಊಟದಲ್ಲಂತೂ ಕಳಪೆ ಗುಣ ಮಟ್ಟದ ಅಡುಗೆ ಮಾಡಲಾಗುತ್ತಿದೆ. ಇರುವ ತರಕಾರಿಗಳು ಕೊಳೆತು ನಾರುತ್ತಿದೆ. ಪೌಷ್ಠಿಕ ಗುಣಮಟ್ಟದ ಆಹಾರವನ್ನು ವಿತರಿಸುತ್ತಿಲ್ಲ ಎಂದು ದೂರಿದರು.
ಸಮಸ್ಯೆಯನ್ನು ವಾರ್ಡನ್ ಮುಂದೆ ಇಟ್ಟರೆ ಕೂಡಲೇ ನಿಮ್ಮ ಲಗೇಜನ್ನು ಎತ್ತಿಕೊಂಡು ಹೊರ ಹಾಕುವುದಾಗಿ ಬೆದರಿಸುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಜೊತೆಗೆ ತರಕಾರಿ ಹಾಗೂ ಪದಾರ್ಥವನ್ನು ಅಡುಗೆ ಮಾಡುವವರು ತಮ್ಮ ಮನೆಗೆ ಸಾಗಿಸುತ್ತಿದ್ದಾರೆ. ನಮಗೆ ಬೇಡವಾದ ಕೊಳೆತ ಪದಾರ್ಥ ಹಾಕುತ್ತಿರುವುದರ ಬಗ್ಗೆ ದೂರು ನೀಡಿದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ್ ಇತ್ತ ಕಡೆ ಗಮನ ನೀಡಲಿಲ್ಲ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕ್ಷಕರು ಪುಂಡಲಿಕ ಮತ್ತು ತಾಲೂಕು ಅಧಿಕಾರಿ ಪರಶುರಾಮು ಘಟನೆ ವಿವರ ಪಡೆದು ವಾರ್ಡನ್ ಸುಮಾ ಹಾಗೂ ಅಡುಗೆ ಮಾಡುವವರಿಗೆ ಎಚ್ಚರಿಕೆ ನೀಡಿದರು. ತಕ್ಷಣ ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದರು.
ಕಳಪೆ ಗುಣಮಟ್ಟದ ತರಕಾರಿ ಪ್ರದರ್ಶಿಸಲು ನೆಲದ ಮೇಲೆ ತರಕಾರಿ ಸುರಿದು ವಿದ್ಯಾರ್ಥಿಗಳು ತಮ್ಮ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್.ಎಫ್.ಐ. ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ರಮೇಶ್, ಆಶಾ, ಎಂ.ಜಿ. ಪೃಥ್ವಿ, ಶಾಲಿನಿ, ಚೇತನ, ಮಮತಾ ಇತರರು ಇದ್ದರು.







