ಉಡುಪಿ: ಶಂಕಿತ ಎಚ್1ಎನ್1ಗೆ ಮಹಿಳೆ ಬಲಿ

ಉಡುಪಿ, ಜು.16: ಉಪ್ಪೂರು ಕೆ.ಜಿ.ರೋಡಿನ ಮಹಿಳೆಯೊಬ್ಬರು ಶಂಕಿತ ಎಚ್1ಎನ್1ನಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಒಂದು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದ 38ರ ಹರೆಯದ ಮಹಿಳೆಯನ್ನು 5 ದಿನಗಳ ಹಿಂದೆ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಎರಡು ದಿನಗಳ ನಂತರ ಮೃತಪಟ್ಟರು. ಮೃತ ಮಹಿಳೆಯ ಪತಿ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿದ್ದು, ಇವರಿಗೆ ಒಂದು ಮಗು ಇದೆ ಎಂದು ತಿಳಿದು ಬಂದಿದೆ.
‘ಕೆ.ಜಿ.ರೋಡಿನ ಮಹಿಳೆ ಎಚ್1 ಎನ್1ನಿಂದ ಮೃತಪಟ್ಟಿರುವ ಬಗ್ಗೆ ಶಂಕೆ ಇದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ಬಳಿಕವೇ ಅದು ಧೃಡಪಡಲಿದೆ’ ಎಂದು ಜಿಲ್ಲಾ ಸರ್ವೇ ಕ್ಷಣಾಧಿಕಾರಿ ಡಾ.ವಾಸುದೇವ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ಜನವರಿಯಿಂದ ಉಡುಪಿ ಜಿಲ್ಲೆಯಲ್ಲಿ ಎಚ್1ಎನ್1 ಕಾಯಿಲೆಯಿಂದ ಐವರು ಮೃತಪಟ್ಟಿರುವುದು ಧೃಢಪಟ್ಟಿದೆ. ಇವರಲ್ಲಿ ಕುಂದಾಪುರ ತಾಲೂಕಿನ ಇಬ್ಬರು ಹಾಗೂ ಉಡುಪಿ ತಾಲೂಕಿನ ಮೂವರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.





