ನಾಳೆಯಿಂದ ಮುಂಗಾರು ಅಧಿವೇಶನ
ಗೋರಕ್ಷಕರ ಹಿಂಸಾಚಾರ, ಜಿಎಸ್‌ಟಿ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು

ಗೋಹತ್ಯೆ ನಿಷೇಧ ಅಧಿಸೂಚನೆಗೆ ಪ್ರತಿಭಟನೆಯ ಸಾಧ್ಯತೆ.
ಕಾಶ್ಮೀರ ಉದ್ವಿಗ್ನತೆ, ಸಿಕ್ಕಿಂ ಗಡಿ ಬಿಕ್ಕಟ್ಟು ಕೂಡಾ ಚರ್ಚೆಯಾಗುವ ನಿರೀಕ್ಷೆ
ಹೊಸದಿಲ್ಲಿ, ಜು.16: ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಳ್ಳಲಿದ್ದು, ಗೋರಕ್ಷಕರಿಂದ ನರಹತ್ಯೆ ಹಾಗೂ ಹಿಂಸಾಚಾರದ ಘಟನೆಗಳು, ಕಾಶ್ಮೀರದ ಉದ್ವಿಗ್ನ ಪರಿಸ್ಥಿತಿ,ಚೀನಾದ ಜೊತೆ ಗಡಿ ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಒಗ್ಗಟ್ಟಾಗಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸನ್ನದ್ಧವಾಗಿದೆ. ಇದರೊಂದಿಗೆ ಮುಂಗಾರು ಅಧಿವೇಶನವು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಆಗಸ್ಟ್ 11ರವರೆಗೆ ನಡೆಯಲಿರುವ ಮುಂಗಾರುವ ಅಧಿವೇಶನದಲ್ಲಿ ಜಿಎಸ್‌ಟಿಯಿಂದ ಉದ್ಯಮರಂಗ ಹಾಗೂ ಗ್ರಾಹಕರ ಮೇಲಾದ ಪ್ರತಿಕೂಲ ಪರಿಣಾಮಗಳು, ರೈತರ ಆತ್ಮಹತ್ಯೆ, ಬರ ಹಾಗೂ ಪಾಕಿಸ್ತಾನದ ಜೊತೆಗಿನ ವಿದೇಶಾಂಗ ನೀತಿ ಇತ್ಯಾದಿ ವಿಷಯಗಳ ಬಗ್ಗೆಯೂ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಕೇಂದ್ರ ಸರಕಾರ ಹೊರಡಿಸಿರುವ ಗೋಹತ್ಯೆ ನಿಷೇಧ ಅಧಿಸೂಚನೆ ಬಗ್ಗೆ ಕೆಲವು ಪಕ್ಷಗಳು ಉಭಯ ಸದನಗಳಲ್ಲೂ ಬಲವಾದ ವಿರೋಧ ವ್ಯಕ್ತಪಡಿಸುವ ನಿರೀಕ್ಷೆಯಿದೆ.
‘‘ಗೋರಕ್ಷಣೆಯ ಹೆಸರಿನಲ್ಲಿ ನರಹತ್ಯೆ ಹಾಗೂ ಹಲ್ಲೆ ಪ್ರಕರಣಗಳು ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ್ದು, ಅವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆಯೆಂಬ ಬಗ್ಗೆ ಕೇಂದ್ರ ಸರಕಾರದಿಂದ ಪ್ರತಿಪಕ್ಷಗಳು ಉತ್ತರವನ್ನು ಕೋರಲಿದೆ’’ ಎಂದು ಸಿಪಿಐ ನಾಯಕ ಡಿ. ರಾಜಾ ತಿಳಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು 18 ಪ್ರತಿಪಕ್ಷಗಳು ಈ ಬಾರಿ ಒಂದೇ ವೇದಿಕೆಯಡಿ ಒಗ್ಗೂಡಿರುವುದು ಗಮನಾರ್ಹವಾಗಿದೆ. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ಈ ಪಕ್ಷಗಳು ಒಗ್ಗೂಡಿವೆ. ಇದೀಗ ಅವು ತಮ್ಮ ಏಕತೆಯನ್ನು ಸಂಸತ್‌ನಲ್ಲಿಯೂ ಪ್ರದರ್ಶಿಸಲು ನಿರ್ಧರಿಸಿರುವುದು ಕೇಂದ್ರ ಸರಕಾರದ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸಿದ್ದಾರೆ.
ಕೆಲವು ಹಾಲಿ ಸಂಸತ್ ಸದಸ್ಯರ ನಿಧನದ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನದ ಆರಂಭದ ದಿನವಾದ ಸೋಮವಾರ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವಷ್ಟೇ ಇರಲಿದ್ದು, ಅಂದು ದೈನಂದಿನ ಕಲಾಪಗಳು ನಡೆಯುವುದಿಲ್ಲ.
ರಾಜ್ಯಸಭಾ ಸದಸ್ಯರಾದ ಮಾಜಿ ಕೇಂದ್ರ ಸಚಿವ ಅನಿಲ್ ಮಾಧವ್ ದವೆ ಹಾಗೂ ಕಾಂಗ್ರೆಸ್ ಸದಸ್ಯ ಪಲವಿ ಗೋವರ್ಧನ ರೆಡ್ಡಿ ಅವರು ಬಜೆಟ್ ಅಧಿವೇಶನದ ಬಳಿಕ ನಿಧನರಾಗಿದ್ದರು. ಗುರುದಾಸ್‌ಪುರದ ಬಿಜೆಪಿ ಸಂಸದ ವಿನೋದ್ ಖನ್ನಾ ಕೂಡಾ ಈ ಅವಧಿಯಲ್ಲಿ ಮೃತಪಟ್ಟಿದ್ದರು.
ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ, ಗೂರ್ಖಾಲ್ಯಾಂಡ್ ಹಿಂಸಾಚಾರ, ನೋಟು ನಿಷೇಧದ ದುಷ್ಪರಿಣಾಮ, ಉದ್ಯೋಗ ನಷ್ಟ ಹಾಗೂ ಸಾರ್ವಜನಿಕರಂಗದ ಸಂಸ್ಥೆಗಳಲ್ಲಿ ಸರಕಾರದ ಹೂಡಿಕೆ ಹಿಂತೆಗೆತ ಬಗ್ಗೆಯೂ ಸಂಸತ್‌ನಲ್ಲಿ ರ್ಚೆಯಾಗುವ ಸಾಧ್ಯತೆಯಿದೆ.
ಪ್ರಧಾನಿಯವರ ಚೊಚ್ಚಲ ಇಸ್ರೇಲ್ ಭೇಟಿ ಕೂಡಾ ಅಧಿವೇಶನದಲ್ಲಿ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆಯೆಂದು ಪ್ರತಿಪಕ್ಷ ಮೂಲಗಳು ತಿಳಿಸಿವೆ.
ಮುಂಗಾರು ಅಧಿವೇಶನದಲ್ಲಿ ಹಲವಾರು ವಿಧೇಯಕಗಳು ಸಂಸತ್‌ನ ಅಂಗೀಕಾರ ಪಡೆಯಲು ಸಾಲುಗಟ್ಟಿನಿಂತಿವೆ. ಭಾರತೀಯ ಮಾಹಿತಿ ತಂತ್ರಜ್ಞಾನ ವಿಧೇಯಕ 2017. ಸ್ಥಿರಾಸ್ತಿ ಸ್ವಾಧೀನ ತಿದ್ದುಪಡಿ ವಿಧೇಯಕ 2917, ಪುರಾತನ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಹಾಗೂ ಪಳೆಯುಳಿಕೆಗಳ ವಿಧೇಯಕ 2017, ಲೋಕಸಭೆಯಲ್ಲಿ ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳಾಗಿವೆ.







