ಲೈಂಗಿಕ ಕಿರುಕುಳದ ಅಪರಾಧಿಯ ಪರೀಕ್ಷಾ ಫಲಿತಾಂಶ ತಡೆಹಿಡಿಯಬಹುದೇ:? ಸುಪ್ರೀಂ ಪರೀಶೀಲನೆ

ಹೊಸದಿಲ್ಲಿ, ಜು. 16: ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಅಂತಿಮವರ್ಷದ ವಿದ್ಯಾರ್ಥಿಯ ಫಲಿತಾಂಶವನ್ನು ಐಐಟಿ ತಡೆಹಿಡಿಯಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಐಐಟಿ ಫಲಿತಾಂಶ ತಡೆಹಿಡಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿಯೋರ್ವ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ, ಅಲಹಾಬಾದ್ ನ್ಯಾಯಾಲಯ ವಿದ್ಯಾರ್ಥಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದ. ಈ ಹಿನ್ನಲೆಯಲ್ಲಿ ಎಲ್. ನಾಗೇಶ್ವರ ರಾವ್ ಹಾಗೂ ಎಸ್.ಎ. ಬೊಡ್ದೆ ಇರುವ ನ್ಯಾಯಪೀಠ ಕೇಂದ್ರ ಸರಕಾರ ಹಾಗೂ ಕಾನ್ಪುರ ಐಐಟಿಗೆ ನೊಟೀಸು ಜಾರಿ ಮಾಡಿದೆ.
ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಮನುಶಂಕರ್ ಮಿಶ್ರಾ, ಅಂತಿಮ ಸೆಮಿಸ್ಟರ್ ಫಲಿತಾಂಶವನ್ನು ವಿಳಂಬವಾಗಿ ನೀಡಿದರೆ ವಿದ್ಯಾರ್ಥಿ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದರು.
ಈತ 2012ರಲ್ಲಿ ಕಾನ್ಪುರ ಐಐಟಿಯ ಭೌತಶಾಸ್ತ್ರ ವಿಭಾಗಕ್ಕೆ ಸೇರಿದ್ದ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಈತ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ 2016 ಎಪ್ರಿಲ್‌ನಲ್ಲಿ ಸಂಸ್ಥೆಯಿಂದ ವಜಾಗೊಳಿಸಲಾಗಿತ್ತು.





