ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಎರಡನೆ ದಿನ ಭಾರತಕ್ಕೆ ನಿರಾಶೆ

ಲಂಡನ್, ಜು.16: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕ್ರೀಡಾಕೂಟದ ಎರಡನೆ ದಿನ ಭಾರತಕ್ಕೆ ಯಾವುದೇ ಸ್ಪರ್ಧೆಯಲ್ಲೂ ಪದಕ ದೊರೆಯಲಿಲ್ಲ.
ಮೊದಲ ದಿನ ಜಾವೆಲಿನ್ ಎಸೆತದಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು.
ಸುಂದರ್ ಸಿಂಗ್ 60.36 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಗೆಲ್ಲುವ ಮೂಲಕ ಭಾರತದ ಖಾತೆಗೆ ಮೊದಲ ಚಿನ್ನ ಜಮೆ ಮಾಡಿದ್ದರು. ಆದರೆ ಎರಡನೆ ದಿನ ಜಾವೆಲಿನ್‌ನಲ್ಲಿ ಸುನೀಲ್ ಪೋಗಟ್ ಮತ್ತು ಡಿಸ್ಕಸ್‌ನಲ್ಲಿ ಅರವಿಂದ ಪದಕ ಗೆಲುವಲ್ಲಿ ಮುಗ್ಗರಿಸಿದರು.
ಪೋಗಟ್ 23.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು 8ನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅರವಿಂದ 44.92 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಏಳನೆ ಸ್ಥಾನ ತನ್ನದಾಗಿಸಿಕೊಂಡರು.
ಮೂರನೆ ದಿನ ಭಾರತಕ್ಕೆ ಡಿಸ್ಕಸ್‌ನಲ್ಲಿ ಜಯದೀಪ್ ದೆಸ್ವಾಲ್ ಮತ್ತು ಹೈಜಂಪ್‌ನಲ್ಲಿ ರಾಂಪಾಲ್ ಚಾಹರ್ ಪದಕದ ಭರವಸೆ ಮೂಡಿಸಿದ್ದಾರೆ.
ಎರಡನೆ ದಿನ ಅಂತಾರಾಷ್ಟ್ರೀಯ ಅಥ್ಲೀಟ್‌ಗಳು 6 ವಿಶ್ವದಾಖಲೆ ಬರೆದರು. ಪ್ಯಾರಾ ಅಥ್ಲೆಟಿಕ್ಸ್‌ನ ಲೆಜೆಂಡ್‌ಗಳಾದ ಬ್ರಿಟನ್‌ನ ರಿಚರ್ಡ್ ವೈಟ್‌ಹೆಡ್ ಮತ್ತು ಅಮೆರಿಕದ ಟಾಟ್ಯಾನ ಮೆಕ್‌ಫಾಡೆನ್ ಉತ್ತಮ ಪ್ರದರ್ಶನ ನೀಡಿದರು.
ವೈಟ್‌ಹೆಡ್ ಟಿ 42 ವಿಭಾಗದ 200 ಮೀಟರ್ ಓಟದ ಫೈನಲ್‌ನಲ್ಲಿ 23.26 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ನಾಲ್ಕನೆ ಚಿನ್ನ ಬಾಚಿಕೊಂಡರು.
ಮೆಕ್‌ಫಾಡೆನ್ ಪ್ಯಾರಾ ಅಥ್ಲೆಟಿಕ್ಸ್‌ನ ಟಿ 54 ವಿಭಾಗದ 200 ಮೀಟರ್ ವೀಲ್‌ಚೇರ್ ರೇಸ್‌ನಲ್ಲಿ 28.08 ಸೆಕೆಂಡ್‌ನಲ್ಲಿ ಗುರಿ ತಲುಪುವುದರೊಂದಿಗೆ ಅಗ್ರಸ್ಥಾನ ಪಡೆದರು. ಅಮೆರಿಕದ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಟಾರ್ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ವಿಭಾಗದಲ್ಲಿ 4 ಚಿನ್ನ ಮತ್ತು 2 ಬೆಳ್ಳಿ ಜಯಿಸಿದ್ದರು.







