ಭಾರತದ ಸಂಧು ವಿಕ್ಟೋರಿಯನ್ ಸ್ಕ್ವಾಷ್ ಚಾಂಪಿಯನ್
ಮಹಿಳೆಯರ ವಿಭಾಗದಲ್ಲಿ ಹಾಂಕಾಂಗ್‌ನ ಲಿಯು ತ್ಝ್ ಲಿಂಗ್‌ಗೆ ಪ್ರಶಸಿ

ಮೆಲ್ಬೋರ್ನ್, ಜು.16: ಭಾರತದ ಹರಿಂದರ್‌ಲಾಲ್ ಸಂಧು ಇಲ್ಲಿ ನಡೆದ ವಿಕ್ಟೋರಿಯನ್ ಓಪನ್ ಸ್ಕ್ವಾಷ್ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿದ್ದಾರೆ.
ಇಂದು ನಡೆದ ಫೈನಲ್‌ನಲ್ಲಿ ಸಂಧು ಅವರು ಆಸ್ಟ್ರೇಲಿಯದ ರೆಕ್ಸ್ ಹೆಡ್ರಿಕ್ ವಿರುದ್ಧ 12-14, 11-3, 11-4, 11-7ರಿಂದ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇವರ ನಡುವಿನ ಫೈನಲ್ ಪಂದ್ಯ ಕೇವಲ 77 ನಿಮಿಷಗಳಲ್ಲಿ ಕೊನೆಗೊಂಡಿತು.
ಮೂರನೆ ಶ್ರೇಯಾಂಕದ ಸಂಧು ಕಳೆದ ವಾರ ಸೌತ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. 28ರ ಹರೆಯದ ಸಂಧು ವಿಕ್ಟೋರಿಯನ್ ಓಪನ್ ಸ್ಕ್ವಾಷ್ ಚಾಂಪಿಯನ್ ಪ್ರಶಸ್ತಿ ಜಯಿಸುವುದರೊಂದಿಗೆ ಈ ವರ್ಷ ನಾಲ್ಕನೆ ಪ್ರಶಸ್ತಿ ಬಾಚಿಕೊಂಡಿದ್ಧಾರೆ. ಶನಿವಾರ ನಡೆದ ವಿಕ್ಟೋರಿಯನ್ ಓಪನ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಹಾಲೆಂಡ್‌ನ ಪೆಡ್ರೊ ಶ್ವೀಟ್‌ಮನ್‌ರನ್ನು ಮಣಿಸಿ ಪ್ರಶಸ್ತಿಯ ಸುತ್ತು ತಲುಪಿದ್ದರು. ಇದೀಗ ಅಗ್ರ ಶ್ರೇಯಾಂಕದ ಆಸ್ಟ್ರೇಲಿಯದ ರೆಕ್ಸ್ ಹೆಡ್ರಿಕ್‌ಗೆ ಸೋಲುಣಿಸಿ ಅವರ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದ್ದಾರೆ.
*ಲಿಯೂ ಮಹಿಳಾ ಚಾಂಪಿಯನ್
ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಂಕಾಂಗ್‌ನ ಲಿಯು ತ್ಝ್ ಲಿಂಗ್ ಅವರು ನ್ಯೂಝಿಲೆಂಡ್‌ನ ಅಮಂಡ ಲ್ಯಾಂಡೆರ್ಸ್ -ಮರ್ಫಿ ವಿರುದ್ಧ 17-15, 11-16, 11-15 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಬಾಚಿಕೊಂಡರು.





