ಟ್ರ್ಯಾಕ್ಟರ್ ನಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು!

ಮಧ್ಯಪ್ರದೇಶ, ಜು.17: ವಿದ್ಯುತ್ ಆಘಾತದಿಂದ ಮೃತಪಟ್ಟ ಬಾಲಕಿಯೊಬ್ಬಳ ಮರಣೋತ್ತರ ಪರೀಕ್ಷೆಯನ್ನು ಟ್ರ್ಯಾಕ್ಟರ್ ನಲ್ಲಿ ನಡೆಸಿದ ಘಟನೆ ಪನ್ನಾ ಜಿಲ್ಲೆಯ ಸಿಮಾರಿಯಾ ಗ್ರಾಮದಲ್ಲಿ ನಡೆದಿದೆ.
15 ವರ್ಷದ ಬಾಲಕಿ ರಕ್ಷಾ ತನ್ನ ತಂದೆಗೆ ಊಟ ನೀಡಲು ಗದ್ದೆಗೆ ತೆರಳಿದ್ದು, ಅಲ್ಲಿಂದ ಹಿಂದಿರುಗುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಗ್ರಾಮಸ್ಥರು ಬಾಲಕಿಯ ಮೃತದೇಹವನ್ನು ಟ್ರ್ಯಾಕ್ಟರ್ ನಲ್ಲಿ ಸಿಮಾರಿಯಾ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆಸ್ಪತ್ರೆಯ ಶವಪರೀಕ್ಷಾ ಕೊಠಡಿಯ ಅವ್ಯವಸ್ಥೆಯ ಕಾರಣ ಟ್ರ್ಯಾಕ್ಟರ್ ಗೆ ಪ್ಲಾಸ್ಟಿಕ್ ಶಿಟನ್ನು ಹೊದಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಪೊಲೀಸರು ಹಾಗೂ ಆಸ್ಪತ್ರೆಯ ವೈದ್ಯರು, ಶವಪರೀಕ್ಷಾ ಕೊಠಡಿಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇರದ ಕಾರಣ ಬಾಲಕಿಯ ಗಾಯಗಳನ್ನಷ್ಟೇ ನಾವು ಟ್ರ್ಯಾಕ್ಟರ್ ನಲ್ಲಿ ಪರಿಶೀಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯನ್ನು ಕೊಠಡಿಯ ಒಳಗೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಆದರೆ ಕೊಠಡಿಯ ಒಳಗೆ ಬೆಳಕಿನ ವ್ಯವಸ್ಥೆ ಇಲ್ಲದಿದ್ದರೆ ಮರಣೋತ್ತರ ಪರೀಕ್ಷೆಯನ್ನು ಹೇಗೆ ನಡೆಸಲಾಯಿತು ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಎಲ್.ಕೆ. ತಿವಾರಿ, “ಟ್ರ್ಯಾಕ್ಟರ್ ನಲ್ಲಿ ಗಾಯಗಳನ್ನು ಮಾತ್ರ ಪರಿಶೀಲಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಕೊಠಡಿಯ ಒಳಗೆ ನಡೆಸಲಾಗಿದೆ” ಎಂದಿದ್ದಾರೆ.







