ಬಿಜೆಪಿಗೆ ಪ್ರಚಾರ ನೀಡಿದ್ದ ಪಿ.ಆರ್. ಏಜೆನ್ಸಿಯಿಂದ ದಿಲೀಪ್ ಗೂ ಪ್ರಚಾರ !

ತೃಶೂರ್,ಜು. 17: ನಟ ದಿಲೀಪ್‍ರಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕೈಗೆತ್ತಿಕೊಂಡಿರುವುದು ಚುನಾವಣೆಗಳಲ್ಲಿ ಬಿಜೆಪಿಗಾಗಿ ಪ್ರಚಾರದ ಹೊಣೆ ಹೊತ್ತಿದ್ದ ಪಿ.ಆರ್ ಏಜೆನ್ಸಿಯೆಂಬ ಆರೋಪ ಕೇಳಿ ಬಂದಿವೆ. ಕೊಚ್ಚಿ ಕೇಂದ್ರವಾಗಿರುವ ಏಜೆನ್ಸಿಗೆ ಕೋಟ್ಯಂತರ ಹಣ ಕೊಟ್ಟು ಪ್ರಚಾರದ ಹೊಣೆ ವಹಿಸಲಾಗಿದೆ ಎಂದು ತನಿಖಾ ತಂಡಕ್ಕೆ ವಿವರ ಲಭಿಸಿದೆ. ಏಜೆನ್ಸಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಿದೆಯೇ ಎಂದು ಪೊಲೀಸರು ಕಾನೂನು ಸಲಹೆ ಪಡೆಯುತ್ತಿದ್ದಾರೆ. ಸೈಬರ್ ಡೋಂ ವಿಭಾಗ ಸಾಕ್ಷ್ಯವನ್ನು ಕೂಡಾ ಸಂಗ್ರಹಿಸಿದೆ. ತನಿಖೆ ನಡೆಯುತ್ತಿರುವಂತೆಯೇ ಆರೋಪಿಗಾಗಿ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಪೊಲೀಸರ ಮನೋಸ್ಥೈರ್ಯ ನಾಶಪಡಿಸುವ ಪ್ರಯತ್ನ ಇದೇ ಮೊದಲ ಸಲ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಧ್ಯಮಗಳಲ್ಲಿ ದಿಲೀಪ್‍ರಿಗೆ ಅನುಕೂಲಕರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಆಯ್ದ ಜನರಿಗೆ ಹಣ ನೀಡುವ ಭರವಸೆ ಕೊಡಲಾಗಿದೆ ಎಂದು ತನಿಖಾ ತಂಡಕ್ಕೆ ವಿವರ ಲಭಿಸಿದೆ. ದಿಲೀಪ್‍ರನ್ನು ಸಿನೆಮಾ ಕ್ಷೇತ್ರದವರನ್ನುಹೊರತು ಪಡಿಸಿದರೆ ಮೊದಲು ಶಾಸಕ ಪಿ.ಸಿ.ಜಾರ್ಜ್ ಬೆಂಬಲಿಸಿದ್ದರು. ಕಳೆದ ದಿವಸ ದಿಲೀಪ್ ನಿರಪರಾಧಿ, ಅವರ ವಿರುದ್ಧ ಸಂಚು ನಡೆಯುತ್ತಿದೆ, ಇದನ್ನು ತನಿಖೆ ಮಾಡಬೇಕೆಂದು ಶಾಸಕ ಜಾರ್ಜ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅದರ ನಂತರ ಜಾರ್ಜ್‍ರ ಪುತ್ರ ಶಾನ್‍ಜಾಜ್ ಕೂಡಾ ದಿಲೀಪ್ ಪರ ಧ್ವನಿಯೆತ್ತಿದ್ದಾರೆ. ಘಟನೆಯನ್ನು ಸಿಬಿಐ ತನಿಖೆ ನಡೆಸಬೇಕು. ದಿಲೀಪ್ ಆಪರಾಧಿಯೆಂದು ಸಾಬೀತಾದರೆ ಶಿಕ್ಷಿಸಲ್ಪಡಲಿ . ಅದುವರೆಗೆ ಮಾಧ್ಯಮ ವಿಚಾರಣೆಯನ್ನು ಕೊನೆಗೊಳಿಸಬೇಕೆಂದು ಶಾನ್ ಫೇಸ್‍ಬುಕ್‍ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳುತ್ತಿದ್ದಾರೆ.
ಸಿನೆಮಾ ಕ್ಷೇತ್ರದಿಂದ ಬಹಿರಂಗ ಹೇಳಿಕೆಯನ್ನು ಹಿರಿಯ ನಟ ಸಿದ್ದೀಕ್ ನೀಡಿದ್ದರು. ಕಳೆದ ಎರಡು ದಿವಸಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ , ಪೊಲೀಸರು ಮತ್ತು ಮಾಧ್ಯಮಗಳನ್ನು ಅಪಹಾಸ್ಯಮಾಡುವ ಪೋಸ್ಟ್‍ಗಳು ಹಾಗೂ ಟ್ರೋಲ್‍ಗಳು ತುಂಬಿಕೊಂಡಿವೆ. ಕೆಲವು ದಿಲೀಪ್ ಪೋಸ್ಟ್‍ಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕೃತಕ ಶೇರ್‍ಗಳನ್ನು ಸೃಷ್ಟಿಸಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಹತ್ತಕ್ಕೂ ಅಧಿಕ ಆನ್‍ಲೈನ್ ಪತ್ರಿಕೆಗಳು ದಿಲೀಪ್ ಪರ ವರದಿಗಳೊಂದಿಗೆ ಕಳೆದ ದಿವಸದವರೆಗೂಸಕ್ರಿಯವಾಗಿದ್ದವು. ಇವುಗಳಲ್ಲಿ ವಿದೇಶದಲ್ಲಿ ನೋಂದಾವಣೆಯಾದ ಡೊಮೈನ್ ಐಡಿಗಳಿವೆ. ಕೆಲವು ಮಾಧ್ಯಮ ಸಂಸ್ಥೆಗಳು ದಿಲೀಪ್ ವಿರುದ್ಧವಾರ್ತೆಗಳಲ್ಲಿ ಅಸಹಿಷ್ಣುತೆ, ಪ್ರತಿಭಟನೆ ಪ್ರಕಟಿಸಿದ ಫೋನ್ ಕರೆಗಳು ಬಂದಿವೆ. ಇವು ಕೂಡಾ ಇದರದ್ದೇ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.







