ಬಿಹಾರದ ಈ ಸರಕಾರಿ ಕಚೇರಿಯ ಉದ್ಯೋಗಿಗಳು ಹೆಲ್ಮೆಟ್ ಧರಿಸಿಕೊಂಡೇ ಕೆಲಸ ಮಾಡುತ್ತಾರೆ!

ಪಾಟ್ನಾ,ಜು.17: ಬೈಕ್‌ಗಳನ್ನು ಓಡಿಸುವಾಗ ಅಥವಾ ಕಟ್ಟಡ ನಿರ್ಮಾಣ ಕಾಮಗಾರಿ ಗಳಲ್ಲಿ ತೊಡಗಿರುವಾಗ ತಲೆಯ ರಕ್ಷಣೆಗಾಗಿ ಹೆಲ್ಮೆಟ್‌ಗಳನ್ನು ಧರಿಸುವುದು ಸಾಮಾನ್ಯ. ಆದರೆ ಕಚೇರಿಯಲ್ಲಿ ಖುರ್ಚಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವಾಗಲೂ ರಕ್ಷಣೆಗೆ ಹೆಲ್ಮೆಟ್ ಧರಿಸುವುದೆಂದರೆ? ಹೌದು, ಇಂತಹ ಸಂಗತಿಗಳು ಭಾರತದಲ್ಲಿ ಮಾತ್ರ ನಡೆಯುತ್ತವೆ!
ಅದ್ಯಾವ ಜನ್ಮದಲ್ಲಿ ಹರಕೆ ಹೇಳಿಕೊಂಡಿದ್ದರೋ ಗೊತ್ತಿಲ್ಲ.....ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿರುವ ಸರಕಾರಿ ಕಚೇರಿಯ ಉದ್ಯೋಗಿಗಳು ದಿನವಿಡೀ ಹೆಲ್ಮೆಟ್ ಧರಿಸಿಕೊಂಡೇ ಕೆಲಸ ಮಾಡುತ್ತಾರೆ. ಹಾಗೆಂದು ಅವರೆಲ್ಲ ಬೈಕರ್‌ಗಳು ಅಥವಾ ಸಾಹಸಗಳನ್ನು ಮಾಡಲು ಆಸಕ್ತರು ಎಂದರ್ಥವಲ್ಲ. ಕಚೇರಿಯ ಛಾವಣಿಯಿಂದ ಸೋರುತ್ತಿರುವ ನೀರಿನಿಂದ ಪಾರಾಗಲು ಅವರೆಲ್ಲ ಹೆಲ್ಮೆಟ್ ಧರಿಸುತ್ತಿದ್ದಾರೆ. ಅಲ್ಲದೆ ಛಾವಣಿಯ ಸಿಮೆಂಟ್ ತುಂಡು ಯಾವಾಗ ಬೇಕಾದರೂ ಉದುರಿ ತಲೆಯ ಮೇಲೆ ಬೀಳಬಹುದಾದ್ದರಿಂದ ಸಂಭಾವ್ಯ ಅವಘಡದಿಂದಲೂ ಹೆಲ್ಮೆಟ್ ಅವರಿಗೆ ರಕ್ಷಣೆ ನೀಡುತ್ತಿದೆ.
ಉದ್ಯೋಗಿಗಳು ಮಾತ್ರವಲ್ಲ, ಈ ಕಚೇರಿಗೆ ಕೆಲಸಕಾರ್ಯಗಳಿಗಾಗಿ ಬರುವ ರ್ಸಾಜನಿಕರಿಗೂ ಇದರ ಹಣೆಬರಹ ಗೊತ್ತಿರುವುದರಿಂದ ತಮ್ಮ ತಲೆಗಳ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿಕೊಂಡೇ ಒಳಗಡಿಯಿಡುತ್ತಾರೆ.
‘‘ಈಗಾಗಲೇ ಛಾವಣಿಯ ಭಾಗಗಳು ಕಳಚಿ ಬಿದ್ದು ಹಲವಾರು ಉದ್ಯೋಗಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಕನಿಷ್ಠ ಪಕ್ಷ ತಲೆಗಳ ಸುರಕ್ಷತೆಗಾದರೂ ಹೆಲ್ಮೆಟ್ ಧರಿಸಿಕೊಂಡೇ ಕೆಲಸ ಮಾಡಲು ನಾವೆಲ್ಲ ನಿರ್ಧರಿಸಿದ್ದೇವೆ ’’ಎನ್ನುತ್ತಾರೆ ಕಚೇರಿಯಲ್ಲಿ ಭೂದಾಖಲೆಗಳ ವಿಭಾಗವನ್ನು ನೋಡಿಕೊಳ್ಳುತ್ತಿರುವ ಲಲ್ಲನ್ ಮತ್ತು ಪರ್ವೇಜ್ ಅಹ್ಮದ್.
‘‘ಇದು ತುಂಬ ಹಳೆಯ ಕಟ್ಟಡವಾಗಿದೆ. ಗೋಡೆಗಳು ಮತ್ತು ಛಾವಣಿ ತೀರ ಹದಗೆಟ್ಟಿದ ಸ್ಥಿತಿಯಲ್ಲಿವೆ. ಮಳೆ ಬಿದ್ದ ತಕ್ಷಣ ಒಳಗೆಲ್ಲ ನೀರು ಸೋರತೊಡಗುತ್ತದೆ. ಛಾವಣಿ ಯಾವತ್ತಾದರೊಂದು ದಿನ ಕುಸಿದು ಬೀಳುವುದು ಗ್ಯಾರಂಟಿ. ಹಾಗೆಂದು ನಾವು ಕೆಲಸಕ್ಕೆ ಗೈರುಹಾಜರಾಗುವಂತಿಲ್ಲವಲ್ಲ. ಅದಕ್ಕಾಗಿ ಸುರಕ್ಷತಾ ಕ್ರಮವಾಗಿ ಹೆಲ್ಮೆಟ್ ಧರಿಸುತ್ತಿದ್ದೇವೆ ’’ಎಂದರು.







