ಮುಖ್ಯ ಅಧೀಕ್ಷಕ ವಿರುದ್ಧ ಕೈದಿಗಳ ಪ್ರತಿಭಟನೆ
ಬೆಂಗಳೂರು, ಜು.17: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಪಾತ್ರ ಇದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಅವರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದು ಜೈಲಿನಲ್ಲಿರುವ ಕೈದಿಗಳು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆಯಿಂದಲೇ ಜೈಲಿನ ಬ್ಯಾರಕ್‌ಗಳಲ್ಲಿದ್ದ ಕೈದಿಗಳು ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದ್ದು, ಕೈದಿಗಳನ್ನು ಭೇಟಿ ಮಾಡಲು ಬರುವ ಸಂಬಂಧಿಕರಿಂದ ಹಣ ಸುಲಿಗೆ ಮಾಡಲಾಗುತ್ತದೆ. ಕೈದಿಗಳು ಪರೋಲ್ ಮೇಲೆ ಜೈಲಿನಿಂದ ಹೊರ ಹೋಗಬೇಕಾದರೂ ಪೊಲೀಸ್ ಅಧಿಕಾರಿಗಳಿಗೆ ಹಣ ನೀಡಬೇಕು ಇದಕ್ಕೆಲ್ಲಾ ಮುಖ್ಯ ಅಧೀಕ್ಷಕರೇ ಕಾರಣ ಎಂದು ಕೈದಿಗಳು ಆರೋಪಿಸಿದ್ದಾರೆನ್ನಲಾಗಿದೆ.
ಅಧೀಕ್ಷಕ ಕೃಷ್ಣಕುಮಾರ್ ಕೆಲ ರೌಡಿ ಕೈದಿಗಳಿಗೆ ಸವಲತ್ತುಗಳನ್ನು ನೀಡಿ ತಮ್ಮ ಹಿಂಬಾಲಕರನ್ನಾಗಿ ಮಾಡಿಕೊಂಡಿದ್ದಾರೆ. ಹಣ ನೀಡದ ಕೈದಿಗಳಿಗೆ ತಮ್ಮ ಹಿಂಬಾಲಕರಿಂದ ಹಲ್ಲೆ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕೃಷ್ಣಕುಮಾರ್ ಪರಪ್ಪನ ಅಗ್ರಹಾರದಲ್ಲಿ ಕೆಲಸ ಮಾಡುತ್ತಿದ್ದು, ಕೈದಿಗಳ ಮೇಲೆ ನಿರಂತರ ಶೋಷಣೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಕೈದಿಗಳು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.





