ಹೊರ ರಾಜ್ಯದವರಿಗೆ ಮಣೆ:ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಬೆಂಗಳೂರು, ಜು.17: ನೀಟ್ ತೇರ್ಗಡೆಯಾದ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೈದ್ಯಕೀಯ ಸೀಟಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿರುವುದನ್ನು ವಿರೋಧಿಸಿ ಪ್ರತಿಭಟಿಸಿದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸೋಮವಾರ ನಗರದ ಮಲ್ಲೇಶ್ವರಂ 18ನೆ ಕ್ರಾಸ್‌ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯ ಮುಂಭಾಗ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ, ವಿದ್ಯಾರ್ಥಿಗಳ ಪಾಲಕರು, ಕರ್ನಾಟಕ ಸಂಘಟನೆಯ ಸದಸ್ಯರು ಪ್ರತಿಭಟಿಸಿ, ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲಿಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಾಗೇಶ್, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವೈದ್ಯಕೀಯ ಸೀಟು ನೀಡುವುದರಿಂದ ರಾಜ್ಯದ ಯುವ ವೈದ್ಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ರಾಜ್ಯ ಸರಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ನಿರ್ಧಾರ ಸರಿಯಲ್ಲ ಎಂದು ಆರೋಪಿಸಿದರು.
ಅಖಿಲ ಭಾರತ ಮಟ್ಟದ ಶೇ.15ರಷ್ಟು ಸೀಟು ಯಾರಿಗೇ ಬೇಕಾದರೂ ಹಂಚಿಕೆ ಮಾಡಲಿ. ಆದರೆ, ಉಳಿದ ಶೇ.85ರಷ್ಟು ಸೀಟು ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಬೇಕು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವೈದ್ಯಕೀಯ ಸೀಟು ನೀಡುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಖಾಸಗಿ, ಸರಕಾರಿ ಹಾಗೂ ಭಾಷಾ ಅಲ್ಪಸಂಖ್ಯಾತರ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15 ರಷ್ಟು ಸೀಟನ್ನು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಡಿ ಪಡೆದುಕೊಳ್ಳಬಹುದು. ಆದರೆ, ಹಿಂದೆಂದೂ ಇಲ್ಲದ ಹೊಸ ಪದ್ಧತಿಯನ್ನು ಜಾರಿ ಮಾಡಲು ಮುಂದಾಗಿರುವ ಪರೀಕ್ಷಾ ಪ್ರಾಧಿಕಾರ ಈಗಲಾದರೂ ಅನ್ಯರಾಜ್ಯದ ವಿದ್ಯಾರ್ಥಿಗಳನ್ನು ರಾಜ್ಯದ ವೈದ್ಯಕೀಯ ಸೀಟು ಹಂಚಿಕೆಗೆ ಆಹ್ವಾನಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳ ಹಾಗೂ ಯುವ ವೈದ್ಯರ ಸಂಘದ(ಕೆಎಂಎಸ್‌ವೈಡಿಎ) ಅಧ್ಯಕ್ಷ ಭರತ್, ಒಕ್ಕೂಟದ ಮಂಚೇಗೌಡ, ರಾಜೇಂದ್ರ ಸೇರಿ ಪ್ರಮುಖರಿದ್ದರು.







