ಮುಖ್ಯಮಂತ್ರಿಗೆ ತಡವಾಗಿ ಜ್ಞಾನೋದಯ: ಎಚ್‌ಡಿಕೆ

ಬೆಂಗಳೂರು, ಜು.17: ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಹಾಗೂ ಗುಪ್ತಚರ ಇಲಾಖೆಯ ಡಿಜಿಪಿ ಎಂ.ಎನ್.ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಅಧಿಕಾರಗಳ ಮೇಲೆ ಹಿಡಿತವಿಲ್ಲ. ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ಸಂಪೂರ್ಣ ದಿವಾಳಿ ಸರಕಾರವಾಗಿದೆ ಎಂದರು.
ಜೈಲಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ಡಿಐಜಿ ಹಾಗೂ ಡಿಜಿಪಿ ಒಂದೊಂದು ರೀತಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದಾರೆ. ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮೂಲಕ ಸರಕಾರ ತನಿಖೆಗೆ ಆದೇಶಿಸಿದೆ. ಈ ಹಂತದಲ್ಲಿ 30-32 ಖೈದಿಗಳನ್ನು ಏಕಾಏಕಿ ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.
ಖೈದಿಗಳನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ. ಖೈದಿಗಳು ಎಲ್ಲಿದ್ದಾರೆ ಎಂಬ ಕುರಿತು ಅವರ ಕುಟುಂಬ ವರ್ಗದವರಿಗೆ ಮಾಹಿತಿ ನೀಡಲು ಅಧಿಕಾರಿಗಳು ತಯಾರಿಲ್ಲ. ಈ ವಿಚಾರದಲ್ಲಿ ಸರಕಾರ ಅನಾಗರಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಕಿಡಿಗಾರಿದರು.
ಈ ಘಟನಾವಳಿಗಳ ಜವಾಬ್ದಾರಿಯನ್ನು ಮುಖ್ಯಮಂತ್ರಿಯೆ ನೇರವಾಗಿ ಹೊರಬೇಕು. ನುಡಿದಂತೆ ನಡೆದಿದ್ದೇವೆ ಎಂದು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ರಾಜ್ಯದ ಜನತೆಗೆ ಸ್ವಚ್ಛ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಹೇಳಿದ್ದರು. ಆದರೆ, ಆಡಳಿತದ ಮೊದಲ ಹೆಜ್ಜೆಯಲ್ಲೆ ಅವರು ವಿಫಲವಾಗಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಮೀರಾಕುಮಾರ್‌ಗೆ ಮತ: ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೈಗೊಂಡ ನಿರ್ಣಯದಂತೆ ಯುಪಿಎ ಮೈತ್ರಿಕೂಟದ 18 ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್ ಪರವಾಗಿ ಮತ ಚಲಾಯಿಸಲು ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಅವರು ಹೇಳಿದರು.
ಎನ್‌ಡಿಎ ಅಭ್ಯರ್ಥಿ ಪರವಾಗಿ ಜೆಡಿಎಸ್ ಪಕ್ಷದ ಶಾಸಕರು ಮತ ಚಲಾಯಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಮ್ಮ ಪಕ್ಷದಲ್ಲಿ ನಿಷ್ಠೆಯಿರುವ 33 ಶಾಸಕರ ಪೈಕಿ ಯಾರೊಬ್ಬರೂ ಅಡ್ಡಮತದಾನ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರೂ ಒಟ್ಟಾಗಿ ಮೀರಾಕುಮಾರ್ ಪರವಾಗಿ ಮತಚಲಾಯಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಹಿರಿಯ ಶಾಸಕ ವೈಎಸ್‌ವಿ ದತ್ತ, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದರು. ಆದರೆ, ಮಾರ್ಗಮಧ್ಯೆ ಅವರ ಹಿರಿಯ ಸಹೋದರಿ ನಿಧನ ಹೊಂದಿದ ಸುದ್ದಿ ಬಂದಿದ್ದು, ಇವತ್ತೆ ಅವರ ಅಂತ್ಯಸಂಸ್ಕಾರವು ನಡೆಯಲಿದೆ. ಆದುದರಿಂದ, ಅನುಮತಿ ಪಡೆದು ವಾಪಸ್ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.







