ಅಯ್ಯಪ್ಪನಗರ ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಧರಣಿ

ಉಡುಪಿ, ಜು.17: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದ ಮುಖ್ಯರಸ್ತೆಯಲ್ಲಿ ಹೊಸದಾಗಿ ಪ್ರಾರಂಭಗೊಂಡ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಮದ್ಯದಂಗಡಿ ಇರುವ ಸ್ಥಳ ಜನವಸತಿ ಪ್ರದೇಶವಾಗಿದ್ದು, ಅಲ್ಲೇ ಸಮೀಪದಲ್ಲಿ ಅಂಗನವಾಡಿ, ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ಶಾಲೆ, ಅಯ್ಯಪ್ಪ ದೇವಸ್ಥಾನ, ಸಾರ್ವಜನಿಕ ಬಸ್ ನಿಲ್ದಾಣಗಳಿವೆ. ಈ ಪ್ರದೇಶದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಧರಣಿ ನಿರತರು ಆರೋಪಿಸಿದರು.
ಮದ್ಯದಂಗಡಿಯಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೇರಣೆ ನೀಡಿ ಈ ಪ್ರದೇಶದಲ್ಲಿ ಅಶಾಂತಿ ಉಂಟಾಗಬಹುದು. ಆದುದರಿಂದ ಇಲ್ಲಿ ಸ್ಥಾಪಿಸಿ ರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಮದ್ಯದಂಗಡಿ ತೆರವು ಮಾಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಬೆಂಗಳೂರಿನಲ್ಲಿರುವ ಅಬಕಾರಿ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಕೆ.ಶಂಕರ್, ಕವಿರಾಜ್, ಕೆ.ಲಕ್ಷ್ಮಣ್, ಗ್ರಾಮಸ್ಥರಾದ ರಾಘ ವೇಂದ್ರ, ಶಶಿಕಲಾ, ಸುಜಾತ, ಪ್ರಿಯಾಂಕ, ಗುಣವತಿ, ಸೀತಾಪತಿ ಮೊದಲಾದವರು ಉಪಸ್ಥಿತರಿದ್ದರು.







