ಪಿಲಿಭಿತ್: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಬಿಜೆಪಿಯ ಮಾಜಿ ಶಾಸಕ

ಪಿಲಿಭಿತ್(ಉ.ಪ್ರ),ಜು.17: ಮಾಜಿ ಬಿಜೆಪಿ ಶಾಸಕ ಸುಖಲಾಲ ಭಾರ್ತಿ(62) ಅವರು ರವಿವಾರ ಇಲ್ಲಿಯ ಸಂಗದಿ ಪ್ರದೇಶದ ವಸುಂಧರಾ ಕಾಲನಿಯಲ್ಲಿಯ ತನ್ನ ನಿವಾಸದ ಬಾಲ್ಕನಿಯಲ್ಲಿ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಘಟನೆ ನಡೆದಾಗ ಅವರ ಪತ್ನಿ,ಪುತ್ರ ಹಾಗೂ ಪುತ್ರಿ ಮನೆಯಲ್ಲಿಯೇ ಇದ್ದರು. ಭಾರ್ತಿ 2007-2012ರ ಅವಧಿಯಲ್ಲಿ ಪಿಲಿಭಿತ್‌ನ ಬರ್ಖೇರಾ ಕೇತ್ರದ ಶಾಸಕರಾ ಗಿದ್ದರು.
ಭಾರ್ತಿಯವರ ತಂದೆ ಕೃಷ್ಣಲಾಲ್ ಭಾರ್ತಿ ಅವರು ಏಳು ಬಾರಿ ಬರ್ಖೇರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅಲಹಾಬಾದ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಭಾರ್ತಿ ತನ್ನ ತಂದೆಯ ನಿಧನದ ಬಳಿಕ ರಾಜಕೀಯವನ್ನು ಪ್ರವೇಶಿಸಿದ್ದರು.
2017ರ ಚುನಾವಣೆಯಲ್ಲಿ ಬರ್ಖೇರಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳ ಪೈಕಿ ಅವರು ಮುಂಚೂಣಿಯಲ್ಲಿದ್ದರು. ಆದರೆ ಬಿಜೆಪಿಯು ಅವಕಾಶ ನಿರಾಕರಿಸಿತ್ತು. ಅವರು ಪತ್ನಿ ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ.
Next Story





