22ರಂದು ಪುತ್ರಿಗೆ ಉಡುಪಿ ಶ್ರೀಗಳಿಗೆ ನಾಗರಿಕ ಸನ್ಮಾನ

ಪುತ್ತಿಗೆಶ್ರೀಗಳಿಗೆ ಜು.22ರಂದು ನಡೆಯಲಿರುವ ನಾಗರಿಕ ಸನ್ಮಾನದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸೋಮವಾರ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಉಡುಪಿ, ಜು.17: ಅಮೆರಿಕದ ನ್ಯೂಜೆರ್ಸಿಯಲ್ಲಿ ಕಾಷ್ಠಶಿಲ್ಪದ ದೇವಾಲಯ ವನ್ನು ನಿರ್ಮಿಸಿ ಅದರ ಗರ್ಭಗುಡಿಯಲ್ಲಿ ಸಾಲಿಗ್ರಾಮದ ಶಿಲೆಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಉಡುಪಿ ನಾಗರಿಕರ ಪರವಾಗಿ ಜು.22ರ ಶನಿವಾರ ಉಡುಪಿಯಲ್ಲಿ ಅಭಿನಂದಿಸಲಾಗುವುದು ಎಂದು ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣರಾವ್ ಕೊಡಂಚ ತಿಳಿಸಿದ್ದಾರೆ.
ಪುತ್ತಿಗೆ ಮಠದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿದೇಶಿ ನೆಲದಲ್ಲಿ ಉಡುಪಿ ಶ್ರೀಕೃಷ್ಣನ ಮೂರ್ತಿಯನ್ನು ಕಡೆದು ನಿಲ್ಲಿಸುವ ಮೂಲಕ ಹಿಂದುಧರ್ಮದ ಕಂಪನ್ನು ಪಸರಿಸಲು ಕೈಗೊಂಡ ಮಹತ್ಕಾರ್ಯಕ್ಕಾಗಿ ಉಡುಪಿ ನಾಗರಿಕರ ವತಿಯಿಂದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಅಂದು ನಗರಸಭೆಯ ವತಿಯಿಂದ ಪೌರ ಸನ್ಮಾನಕ್ಕೂ ಮನವಿ ಮಾಡಿದ್ದು, ಅವರು ತಾತ್ವಿಕವಾಗಿ ಒಪ್ಪಿದ್ದಾರೆ ಎಂದು ಕೊಡಂಚ ತಿಳಿಸಿದರು. ಸಂಜೆ 4:00 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಪುತ್ತಿಗೆ ಶ್ರೀಗಳನ್ನು ಕೋರ್ಟ್ ರೋಡ್ ಮಾರ್ಗವಾಗಿ ಶೋಭಾಯಾತ್ರೆಯಲ್ಲಿ ರಥಬೀದಿಗೆ ವಾಹನ ಜಾಥಾದಲ್ಲಿ ಕರೆತರಲಾಗುವುದು ಎಂದರು.
ಅಭಿನಂದನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶುಭಾಶಂಸನೆ ಮಾಡಲಿದ್ದಾರೆ. ಪೇಜಾವರ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ ಹಾಗೂ ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆರ್ಶೀವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯಕುಮಾರ್ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಮೂಡಬಿದರೆಯ ಡಾ.ಮೋಹನ ಆಳ್ವ ಮುಂತಾದವರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಕೃಷ್ಣರಾಜ ಸರಳಾಯ, ಬೆಳಪು ದೇವಿಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಶ್ರೀಕಾಂತ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ, ಗೋಪಾಲಾಚಾರ್ಯ ಉಪಸ್ಥಿತರಿದ್ದರು.







