ಹಿರಿಯ ನಟಿ ಲೀಲಾವತಿ ನಿರ್ಮಿಸಿದ್ದ ಆಸ್ಪತ್ರೆ ಧ್ವಂಸ: ಅರೋಪ

ಬೆಂಗಳೂರು, ಜು.17: ಬಡವರ ಅನುಕೂಲಕ್ಕಾಗಿ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿ ನಿರ್ಮಿಸಿದ್ದ ಆಸ್ಪತ್ರೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ.
ಐದು ವರ್ಷದ ಹಿಂದೆ ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಬಡವರಿಗಾಗಿ ನಗರದ ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಡಾ.ಎಂ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಿದ್ದರು. ಆದರೆ, ರವಿವಾರ ರಾತ್ರಿ ದುಷ್ಕರ್ಮಿಗಳ ತಂಡ ಆಸ್ಪತ್ರೆಯನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ.
ರಾತ್ರಿ ಯಾರು ಇಲ್ಲದ ವೇಳೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿ ಪೀಠೋಪಕರಣ, ಔಷಧಿಗಳು ಸೇರಿದಂತೆ ಆಸ್ಪತ್ರೆಯ ಮೇಲ್ಛಾವಣಿಯನ್ನು ಸಹ ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಣ್ಣೀರು: ಆಸ್ಪತ್ರೆಗೆ ನಟಿ ಲೀಲಾವತಿ ಹಾಗೂ ಮಗ ವಿನೋದ್‌ರಾಜ್ ಭೇಟಿ ನೀಡಿ ಬೇಸರದಿಂದ ಕಣ್ಣೀರಿಟ್ಟರು. ಪದೇ ಪದೇ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯವೆಸಗಿ ತಮಗೆ ನೋವುಂಟು ಮಾಡುತ್ತಿದ್ದಾರೆ ಎಂದು ನಟಿ ಲೀಲಾವತಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.







