ಜಿಲ್ಲೆಯ ಶಾಂತಿ, ಸಹಬಾಳ್ವೆಯ ಪರಂಪರೆ ಉಳಿಸೋಣ: ಎ.ಪಿ.ಅಬೂಬಕರ್ ಮುಸ್ಲಿಯಾರ್

ಮಂಗಳೂರು, ಜು.17: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್, ಜಿಲ್ಲೆಯಲ್ಲಿ ಶಾಂತಿ ಮತ್ತು ಸಹಬಾಳ್ವೆ ಉಳಿಸಲು ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದ್ದಾರೆ.
ಕರ್ನಾಟಕ ಸುನ್ನಿ ಸಮನ್ವಯ ಸಮಿತಿಯು ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆ ಅನೇಕ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪರಂಪರೆಯುಳ್ಳ ಜಿಲ್ಲೆಯಾಗಿದೆ. ಅನೇಕ ಮಸೀದಿಗಳು, ದೇವಸ್ಥಾನಗಳು, ಚರ್ಚ್‌ಗಳು ಇರುವುದರಿಂದ ಎಲ್ಲ ಧರ್ಮಗಳು ಕೂಡ ಶಾಂತಿಯ ಸಂದೇಶವನ್ನು ಬೋಧಿಸುತ್ತಿದೆ. ಇಂತಹ ಶಾಂತಿಯ ಸಂದೇಶವನ್ನು ಆಯಾ ಧರ್ಮಗಳ ಜನರು ಪಾಲಿಸಬೇಕಾದ ಕರ್ತವ್ಯ ಅವರವರ ಮೇಲಿದೆ. ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುವುದಕ್ಕೆ ಅರ್ಥವಿಲ್ಲ. ಧಾರ್ಮಿಕ ಜ್ಞಾನ ಇಲ್ಲದವರು ಮತ್ತು ಆರಾಧನಾಲಯಗಳಿಗೆ ಹೋಗದ ಕೆಲವೇ ಜನರಿಂದ ಅಹಿತಕರ ಘಟನೆಗಳು ಮರುಕಳಿಸುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಹನೆಯನ್ನು ಮೀರದೆ ಶಾಂತಿ ಕಾಪಾಡುವಂತೆ ಉಸ್ತಾದ್ ಕರೆ ನೀಡಿದರು.
ವಿವಿಧ ಜಾತಿ, ಧರ್ಮಗಳ ಜನರು ವಾಸಿಸುವ ಜಿಲ್ಲೆಯಲ್ಲಿ ಸೌಹಾರ್ದವನ್ನು ಹಾಳುಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹವಣಿಸುತ್ತಿವೆ. ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ಜನರನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳು ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ಜಿಲ್ಲೆಯ ಓಟ್‌ಬ್ಯಾಂಕ್ ರಾಜಕಾರಣವನ್ನು ಬೆಂಬಲಿಸದಂತೆ ಎ.ಪಿ.ಉಸ್ತಾದ್ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ನಡೆದ ಕೋಮುದ್ವೇಷ, ಕೋಮು ಘರ್ಷಣೆಗಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಅಮಾಯಕರಾಗಿದ್ದಾರೆ. ಯಾರೋ ಮಾಡಿದ ಕೃತ್ಯಕ್ಕೆ ಇನ್ಯಾರನ್ನೋ ಬಲಿ ಪಡೆಯುವ ದುಸ್ಸಾಹಸಕ್ಕೆ ಕೈಹಾಕಬಾರದು. ಸಂತ್ರಸ್ತರ ನೋವು, ಕಣ್ಣೀರು, ಬೇಗುದಿಗಳಿಗೆ ನಾವು ಕಾರಣರಾಗಬಾರದು. ಇಂತಹ ನಿಕೃಷ್ಟ ಮತ್ತು ಪಾಪದ ಕೆಲಸದಿಂದ ದೂರವಿರಬೇಕೆಂದು ಉಸ್ತಾದ್ ಕರೆ ನೀಡಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ
ದುಷ್ಕೃತ್ಯಗಳನ್ನು ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಆದರೆ, ನಿರಪರಾಧಿಗಳ ಬಂಧನವಾಗಬಾರದು. ಉದ್ರೇಕಕಾರಿ ಭಾಷಣಗಳನ್ನು ಜನರು ಬೆಂಬಲಿಸಬಾರದು. ಯಾರು ತಪ್ಪು ಮಾಡಿದರೂ ಅವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ಉಸ್ತಾದ್ ಹೇಳಿದರು.
ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಮಾತನಾಡಿ, ನಾಡಿನ ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿ ಬಹುತೇಕ ಜನರು ಶಾಂತಿಯನ್ನೇ ಬಯಸಿದವರಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಶಾಂತಿ ಮತ್ತು ಸಹೋದರತೆಯ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಉಲಮಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸುನ್ನೀ ಕೋ ಆರ್ಡಿನೇಶನ್ ಸಮಿತಿಯ ರಾಜ್ಯಾಧ್ಯಕ್ಷ ಶರ್ಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಪಂಪ್‌ವೆಲ್ ತಖ್ವಾ ಮಸೀದಿಯ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಇಹ್ಸಾನ್ ರಾಜ್ಯಧ್ಯಕ್ಷ ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಇಸ್ಮಾಯೀಲ್ ಸಖಾಫಿ, ಎಸ್.ಎಂ.ಹಂಝ ಸಖಾಫಿ,ಎಸ್ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಮ್ ಕಾಮಿಲ್ ಸಖಾಫಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







