ಸೇವೆ ಖಾಯಂಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು, ಜು.17: ಸೇವೆ ಖಾಯಂಗೊಳಿಸಬೇಕು ಹಾಗೂ ನೇರ ನೇಮಕಾತಿಯಲ್ಲಿ ಶೇ.50 ರಷ್ಟು ಹುದ್ದೆಗಳನ್ನು ಗುತ್ತಿಗೆ ಕಾರ್ಮಿಕರಿಗೆ ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಟಿಸಿಎಲ್ ವಿದ್ಯುತ್ ಗುತ್ತಿಗೆ ನೌಕರರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯಾದ್ಯಂತ ವಿದ್ಯುತ್ ನಿಗಮದಲ್ಲಿ ಸಾವಿರಾರು ವಿದ್ಯುತ್ ನೌಕರರು 10-20 ವರ್ಷಗಳಿಂದ ಎಇ, ಜೆಇ, ಆಪರೇಟರ್ಸ್, ಹೆಲ್ಪರ್ಸ್, ಡಾಟಾ ಆಪರೇಟರ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಆದರೆ, 20 ವರ್ಷಗಳ ಅನುಭವವನ್ನು ಮೂಲೆಗುಂಪು ಮಾಡುವ ಹುನ್ನಾರ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ನೆಪದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ನೂತನವಾಗಿ ವಿದ್ಯಾಭ್ಯಾಸ ಮುಗಿಸಿಕೊಂಡು ಬರುವ ಹೊಸಬರಿಗೆ ಅವರ ವಿದ್ಯಾರ್ಹತೆ ಆಧಾರದ ಮೇಲೆ ಕೆಲಸ ಪಡೆದುಕೊಳ್ಳಲಿದ್ದು, ಸೇವಾ ಅನುಭವವಿರುವವರು ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗುತ್ತದೆ. ಹೀಗಾಗಿ ನೇರ ನೇಮಕಾತಿಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಗುತ್ತಿಗೆ ನೌಕರರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗ ಭದ್ರತೆಯಿಲ್ಲದೆ ನರಳುತ್ತಿದ್ದಾರೆ. ಹತ್ತಾರು ವರ್ಷಗಳು ದುಡಿದ ಕಾರ್ಮಿಕರಿಗೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ, ಕಾರ್ಮಿಕರಿಗೆ ಸಿಗಬೇಕಾದ ಇಎಸ್‌ಐ, ಪಿಎಫ್, ಬೋನಸ್, ರಾತ್ರಿ ಪಾಳಿಯ ಭತ್ತೆ, ರಜೆ ಸೌಲಭ್ಯ, ಸಮಾನ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ನೇರ ನೇಮಕಾತಿ ಹೆಸರಿನಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಗುತ್ತಿಗೆ ಕಾರ್ಮಿಕರ ಸೇವೆ ಖಾಯಂ ಮಾಡಬೇಕು. ಅದಕ್ಕಾಗಿ ಅಗತ್ಯವಿರುವ ಸೇವಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು. ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ.50 ರಷ್ಟು ಹುದ್ದೆಗಳನ್ನು ಗುತ್ತಿಗೆ ಕಾರ್ಮಿಕರಿಗೆ ಮೀಸಲಿಡಬೇಕು. ಗುತ್ತಿಗೆ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಹೊರ ಗುತ್ತಿಗೆ ರದ್ಧು ಪಡಿಸಿ, ನೇರ ಗುತ್ತಿಗೆಯಲ್ಲಿ ಸೇವೆಯನ್ನು ಮುಂದುವರಿಸಬೇಕು ಎಂದರು.
ಸುಪ್ರೀಂ ಕೋರ್ಟಿನ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ನೌಕರರಿಗೆ ಬೋನಸ್, ಇಎಸ್‌ಐ, ಪಿ.ಎಫ್, ರಾತ್ರಿಪಾಳೆಯ ಭತ್ತೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು. ವಿದ್ಯುತ್ ಅಪಘಾತಗಳಿಗೆ ಒಳಗಾದ ನೌಕರರಿಗೆ ಸೂಕ್ತ ಪರಿಹಾರ ನೀಡಬೇಕು. ಮೃತರಾದ ಕುಟುಂಬಕ್ಕೆ 10 ಲಕ್ಷ ರೂ.ಗಳು ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಸಚಿವರ ಭೇಟಿ: ಪ್ರತಿಭಟನೆಯ ಅಂಗವಾಗಿ ಸಂಘಟನೆಯ ನಿಯೋಗ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಈ ವೇಳೆ ತೆಲಂಗಾಣ ಮಾದರಿಯಲ್ಲಿ ನೌಕರರ ಸೇವೆ ಖಾಯಂ ಮಾಡಬೇಕು. ಹೊರಗುತ್ತಿಗೆ ಶೋಷಣೆ ತಪ್ಪಿಸಲು ಕಂಪೆನಿಯಿಂದಲೇ ನೇರ ವೇತನ ಪಾವತಿ ಹಾಗೂ ನಿವೃತ್ತಿಯಾಗುವವರೆಗೂ ಸೇವೆಯಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಹ ಕಾರ್ಯದರ್ಶಿ ಎನ್.ಎಸ್.ವೀರೇಶ್, ಮುಖಂಡರಾದ ಗಂಗಾಧರ, ಮಲ್ಲಿಕಾರ್ಜುನ, ಎಸ್.ಎಂ.ಶರ್ಮಾ, ಎನ್.ರಾಜು, ಉಮೇಶ್, ಮಹಾದೇವ್, ಬಸವರಾಜ್, ಅಮೃತ್ ಇನ್ನಿತರರು ಭಾಗವಹಿಸಿದ್ದರು.







