ಅಕ್ರಮಗಣಿಗಾರಿಕೆ ತನಿಖೆಗೆ ಅಡ್ಡಿ:ರೈತಸಂಘ ಪ್ರತಿಭಟನೆ

ಪಾಂಡವಪುರ, ಜು.17: ತಾಲೂಕಿನ ಬೇಬಿಬೆಟ್ಟದ ಅಮೃತ ಮಹಲ್ ಕಾವಲ್ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಂಸದ ಸಿಎಸ್.ಪುಟ್ಟರಾಜು ಮತ್ತಿತರರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪುಟ್ಟರಾಜು ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಜವಾಬ್ಧಾರಿಯುತ ಸ್ಥಾನದಲ್ಲಿರುವ ಪುಟ್ಟರಾಜು ಅವರು ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳಿಗೆ ತಮ್ಮ ಬೆಂಬಲಿಗರೊಂದಿಗೆ ಧಮಕಿ ಹಾಕಿರುವುದಲ್ಲದೇ ತನಿಖೆಗೆ ಅಡ್ಡಿಪಡಿಸಿರುವುದು ಅಕ್ಷಮ್ಯವಾಗಿದೆ ಎಂದು ಆರೋಪಿಸಿದರು.
ತನಿಖಾಧಿಕಾರಿಗಳು ಯಾವುದೇ ಬೆದರಿಕೆಗೆ ಹೆದರದೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಕಡಿವಾಣ ಹಾಕಬೇಕು. ಈ ಸಂಬಂಧ ತಮ್ಮ ತನಿಖೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯರಾದ ಎ.ಎಲ್.ಕೆಂಪೂಗೌಡ, ಕೆ.ಟಿ.ಗೋವಿಂದೇಗೌಡ, ಪಿಎಸ್‍ಎಸ್‍ಕೆ ಉಪಾಧ್ಯಕ್ಷ ಹರವು ಪ್ರಕಾಶ್, ವೈ.ಪಿ.ಮಂಜುನಾಥ್, ಅನಿಲ್, ರಾಜೇಂದ್ರ, ವಿಜೇಂದ್ರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





