ತಳಿ ಮಾರ್ಪಡಿಸಿದ ಸಾಸಿವೆ ಬೀಜ:ವಿವೇಚನಾಯುಕ್ತ ನಿರ್ಧಾರಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಜು.17: ತಳಿ ಮಾರ್ಪಡಿಸಿದ ಸಾಸಿವೆ ಬೀಜದ ವಾಣಿಜ್ಯಕ ಬಿಡುಗಡೆಯ ಕುರಿತು ಕಾರ್ಯನೀತಿ ರೂಪಿಸುವ ಮೊದಲು ವಿವೇಚನಾಯುಕ್ತ ಹಾಗೂ ಸರಿಯಾದ ಮಾಹಿತಿ ಪಡೆದ ಅಭಿಪ್ರಾಯಕ್ಕೆ ಬರಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಇದೊಂದು ತೀರಾ ಮಹತ್ವಪೂರ್ಣ ವಿಷಯವಾಗಿದೆ. ಒಮ್ಮೆ ಇದಕ್ಕೆ ಅವಕಾಶ ಮಾಡಿಕೊಟ್ಟರೆ ಬಳಿಕ ಇದರ ಪರಿಣಾಮವನ್ನು ಪೂರ್ವಸ್ಥಿತಿಗೆ ತರಲಾಗದು. ಆದ್ದರಿಂದ ಸರಿಯಾದ ಮಾಹಿತಿ ಪಡೆದ ವಿವೇಚನಾಯುಕ್ತ ನಿರ್ಧಾರಕ್ಕೆ ಬರಬೇಕು ಎಂದು ಕೇಂದ್ರ ಸರಕಾರಕ್ಕೆ ತಿಳಿಸಿದೆ. ಅಲ್ಲದೆ ಕೇಂದ್ರದ ಕಾರ್ಯನೀತಿಯ ನಿರ್ಧಾರ ಯಾವಾಗ ಅನುಷ್ಠಾನಕ್ಕೆ ಬರಲಿದೆ ಎಂಬುದನ್ನು ಒಂದು ವಾರದೊಳಗೆ ತನಗೆ ತಿಳಿಸಬೇಕೆಂದು ಸೂಚಿಸಿದೆ.
ಆರಂಭದಲ್ಲಿ ನಾಲ್ಕು ವಾರಗಳ ಸಮಯವನ್ನು ಕೇಂದ್ರಕ್ಕೆ ನೀಡಿದ್ದ ನ್ಯಾಯಮೂರ್ತಿಗಳಾದ ಜೆ.ಎಸ್.ಖೇಹರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ವಿಭಾಗೀಯ ಪೀಠವು, ಒಂದು ವಾರದೊಳಗೆ ಸ್ಪಷ್ಟ ನಿರ್ಧಾರ ತಿಳಿಸಲಾಗುವುದು ಎಂಬ ಹೆಚ್ಚುವರಿ ಅಟಾರ್ನಿ ಜನರಲ್ ತುಷಾರ್ ಮೆಹ್ತ ಅವರ ಹೇಳಿಕೆಗೆ ಸಮ್ಮತಿಸಿ ಒಂದು ವಾರದ ಸಮಯ ನೀಡಿತು. ತಳಿ ಮಾರ್ಪಡಿಸಿದ ಸಾಸಿವೆ ಬೀಜದ ವಾಣಿಜ್ಯಕ ಬಿಡುಗಡೆಗೆ ನೀಡಿದ್ದ ತಡೆಯಾಜ್ಞೆಯನ್ನು ಕಳೆದ ವರ್ಷದ ಅಕ್ಟೋಬರ್ 17ರಂದು ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು. ಈ ರೀತಿಯ ಬೀಜವನ್ನು ಕೃಷಿ ಉಪಯೋಗಕ್ಕೆ ಬಿಡುಗಡೆ ಮಾಡುವ ಮುನ್ನ ಸಾರ್ವಜನಿಕರ ಅಭಿಪ್ರಾಯವನ್ನು ಕ್ರೋಢೀಕರಿಸುವಂತೆ ಸರಕಾರಕ್ಕೆ ತಿಳಿಸಿತ್ತು.
ಭಾರತದ ಪ್ರಮುಖ ಚಳಿಗಾಲದ ಬೆಳೆಯಾಗಿರುವ ಸಾಸಿವೆಯ ಬೀಜವನ್ನು ಅಕ್ಟೋಬರ್ ಮಧ್ಯಭಾಗದಿಂದ ನವೆಂಬರ್ ಅಂತ್ಯದವರೆಗೆ ಬಿತ್ತಲಾಗುತ್ತದೆ. ತಳಿ ಮಾರ್ಪಡಿಸಿದ ಸಾಸಿವೆ ಬೀಜದ ವಾಣಿಜ್ಯಕ ಬಿಡುಗಡೆಗೆ ತಡೆ ನೀಡಬೇಕು ಮತ್ತು ಇವನ್ನು ವಿವಿಧ ಹೊಲಗಳಲ್ಲಿ ಬಿತ್ತುವುದನ್ನು ನಿರ್ಬಂಧಿಸಬೇಕು ಎಂದು ಅರ್ಜಿದಾರ ಅರುಣ ರಾಡ್ರಿಗಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಜೈವಿಕ ಸುರಕ್ಷಾ ಕ್ರಮಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸದೆ ಸರಕಾರ ಹಲವು ಹೊಲಗಳಲ್ಲಿ ಈ ಸಾಸಿವೆಗಳನ್ನು ಬಿತ್ತಿದೆ. ಸಂಬಂಧಿತ ಪರೀಕ್ಷೆಗಳನ್ನು ಕೈಗೊಳ್ಳದೇ ಕ್ಷೇತ್ರ ಪ್ರಯೋಗಗಳನ್ನು ನಡೆಸಲಾಗುತ್ತಿರುವ ಕಾರಣ ಇದಕ್ಕೆ 10 ವರ್ಷಗಳ ತಾತ್ಕಾಲಿಕ ನಿಷೇಧ ವಿಧಿಸಬೇಕೆಂದು ಅರ್ಜಿದಾರರ ಪರ ವಕೀಲ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸಂಪೂರ್ಣ ಪ್ರಕ್ರಿಯೆಯೇ ಗೊಂದಲ, ಅವ್ಯವಸ್ಥೆಯಿಂದ ಕೂಡಿರುವ ಕಾರಣ ಇದಕ್ಕೆ 10 ವರ್ಷಗಳ ನಿಷೇಧ ವಿಧಿಸಬೇಕೆಂದು ತಾಂತ್ರಿಕ ಪರಿಣತರ ಸಮಿತಿಯೊಂದು ತಿಳಿಸಿದೆ ಎಂದು ಭೂಷಣ್ ಹೇಳಿದ್ದಾರೆ.







