ಶೀಘ್ರದಲ್ಲಿಯೇ ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್: ನಾಗರಾಜ್

ಬೆಂಗಳೂರು, ಜು.18: ಕೇಂದ್ರಕ್ಕೆ ಎಲೆಕ್ಟ್ರಿಕಲ್ ಬಸ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ನಾಗರಿಕರ ಸೇವೆಗೆ ಎಲೆಕ್ಟ್ರಿಕಲ್ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದ್ದಾರೆ.
ಮಂಗಳವಾರ ಬೆಂ.ಉತ್ತರ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಕೆ.ಆರ್ ಮಾರುಕಟ್ಟೆ-ಶ್ಯಾನುಭೋಗನಹಳ್ಳಿ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 150 ಎಲೆಕ್ಟ್ರಿಕಲ್ ಬಸ್‌ಗಳ ಖರೀದಿಗೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ರಾಜ್ಯ ಸಾರಿಗೆ ಸಚಿವರು ಕೇಂದ್ರದ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಎಂಟಿಸಿ ನೌಕರರು ಹಾಗೂ ಅವರ ಕುಟುಂಬ ವರ್ಗಕ್ಕೆ ಉತ್ತಮ ಆರೋಗ್ಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಬಿಎಂಟಿಸಿ ವತಿಯಿಂದ ನಗರದ ಯಶವಂತಪುರ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ, ಸರಕಾರವೇ ಅದರ ನಿರ್ವಹಣೆ ಮಾಡುವಂತಹ ನೂತನ ಯೋಜನೆಯನ್ನು ರೂಪಿಸಿದ್ದು, ಇದಕ್ಕಾಗಿ ಜಾಗವನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಹವಾನಿಯಂತ್ರಿತ ಬಸ್‌ಗಳಲ್ಲಿ ಈಗಾಗಲೇ ವೈಫೈ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಎಲ್ಲ್ಲ ಬಸ್‌ಗಳಿಗೂ ವಿಸ್ತರಿಸಲಾಗುವುದು. ಅದೇ ರೀತಿ, ವಿದ್ಯಾರ್ಥಿಗಳಿಗಾಗಿ ಈಗಾಗಲೇ ಸ್ಮಾರ್ಟ್ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದ್ದು, ಇದನ್ನು ಎಲ್ಲ ಪ್ರಯಾಣಿಕರಿಗೂ ವಿಸ್ತರಿಸಲು ಶ್ರಮಿಸಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬಸ್‌ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುವುದೆಂದು ನಾಗರಾಜ್ ತಿಳಿಸಿದರು.
ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಸಂಚಾರ ಸೌಲಭ್ಯ ಕಲ್ಪಿಸಲು ಸರ್ವ ಪ್ರಯತ್ನ ಮಾಡಲಾಗತ್ತಿದೆ. ಇಂತಹ ಹಲವು ನೂತನ ಯೋಜನೆಗಳ ಮೂಲಕ ಬಿಎಂಟಿಸಿ ದೇಶದಲ್ಲಿಯೇ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದ ಅವರು, ಸುರಕ್ಷತೆ, ಇಂಧನ ಉಳಿತಾಯದ ನಿಟ್ಟಿನಲ್ಲಿ ನಾಗರಿಕರು ಬಿಎಂಟಿಸಿ ಬಸ್‌ಗಳಲ್ಲಿಯೇ ಪ್ರಯಾಣಿಸುವಂತಾಗಬೇಕೆಂದರು.
ಈ ವೇಳೆ ಬಿಎಂಟಿಸಿ ನಿರ್ದೇಶಕ ಶಶಿಕುಮಾರ್, ಯಲಹಂಕ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಬಾಷಾ, ಗ್ರಾಮ ಪಂಚಾಯಿತಿ ಸದಸ್ಯ ಪಟೇಲ್ ನಾರಾಯಣಸ್ವಾಮಿ ಸೇರಿ ಪ್ರಮುಖರು ಹಾಜರಿದ್ದರು.







