ಆತಂರಿಕ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಿ: ದಿನೇಶ್ ಗುಂಡೂರಾವ್ ಕಿವಿ ಮಾತು

ಮಡಿಕೇರಿ ಜು.18 : ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದೊಳಗಿನ ಆತಂರಿಕ ಭಿನ್ನಾಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆ ಹರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ಶ್ರಮಿಸಬೇಕೆಂದು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ನಗರದ ಕೂರ್ಗ್ ಕಮ್ಯುನಿಟಿ ಹಾಲ್‌ನಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕ್ಷದ ಏಳಿಗೆಯ ಮೂಲಕ ಕಾರ್ಯಕರ್ತರು ಕೂಡ ರಾಜಕೀಯವಾಗಿ ಬೆಳವಣಿಗೆಯನ್ನು ಕಾಣಲು ಸಾಧ್ಯವಿದ್ದು, ಪಕ್ಷದ ಹಿತವನ್ನು ಕಾಯುವುದು ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯವಾಗಿರಬೇಕೆಂದರು. ಬ್ಲಾಕ್ ಮಟ್ಟದಲ್ಲಿ ಪಕ್ಷದ ಪರಿಸ್ಥಿತಿ ಹದಗೆಟ್ಟಿದ್ದು, ಅದನ್ನು ಸರಿಪಡಿಸುವ ಕಾರ್ಯವಾಗಬೇಕಾಗಿದೆ. ಸಣ್ಣಪುಟ್ಟ ಅಸಮಾಧಾನಗಳು ಅತ್ಯಂತ ದೊಡ್ಡ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಸಾಮಾನ್ಯ. ಇದೆಲ್ಲವನ್ನೂ ಬದಿಗೊತ್ತಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.
ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ ದಿನೇಶ್ ಗುಂಡೂರಾವ್, ಜು.30ರ ಒಳಗಾಗಿ ಕಡ್ಡಾಯವಾಗಿ ಬ್ಲಾಕ್ ಹಾಗೂ ಬೂತ್ ಸಮಿತಿಯನ್ನು ರಚಿಸುವಂತೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಬಡವರಿಗೆ, ದಲಿತರಿಗೆ, ಹಿಂದುಳಿದ ವರ್ಗಕ್ಕೆ ಅಲ್ಪಸಂಖ್ಯಾತರಿಗೆ ಸೇರಿದಂತೆ ಎಲ್ಲಾ ಸಮಾನ ರೀತಿಯಲ್ಲಿ ಜಾರಿಗೆ ತಂದಿದ್ದಾರೆ. ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಿದ್ದು, ಒಂದು ರೂ. ಅಕ್ಕಿಯ ಮೂಲಕ ಹಸಿವು ಮುಕ್ತ ಕರ್ನಾಟಕದ ಕನಸನ್ನು ನನಸು ಮಾಡಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೆ ತೆರಳಿ ಸರ್ಕಾರದ ಜನಪರ ಯೋಜನೆಗಳನ್ನು ತಿಳಿಸಿ ಜಾಗೃತಿ ಮೂಡಿಸಬೇಕೆಂದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಉಸ್ತುವಾರಿ ವಿಶ್ವನಾದನ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಗೂ ಮೀರಿ ಬೆಳವಣಿಗೆಯನ್ನು ಕಾಣುತ್ತಿದ್ದು, ಕಾರ್ಯಕರ್ತರ ಒಗ್ಗಟ್ಟಿನ ಚಟುವಟಿಕೆಯಿಂದ ಮತ್ತಷ್ಟು ಬಲ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ಜಿಲ್ಲಾ ಘಟಕದಸ ಕಾರ್ಯ ವೈಖರಿ ಮತ್ತು ಪಕ್ಷ ಚಟುವಟಿಕೆಯ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಮಾತನಾಡಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರ ಸ್ಥಾನ ಖಾಲಿಯಿದ್ದು, ಸಧ್ಯದಲ್ಲಿಯೇ ಅಧ್ಯಕ್ಷರ ನೇಮಕವಾಗಲಿದೆ ಎಂದರು. ಅಲ್ಲದೆ ಅಧ್ಯಕ್ಷರು ಹಾಗೂ ಸಲಹ ಸಮಿತಿಯನ್ನು ಕೂಡ ರಚಿಸಲಾಗುತ್ತದೆ ಎಂದರು. ವಲಯಾಧ್ಯಕ್ಷರ ಆಯ್ಕೆ ಸಂದರ್ಭ ಯುವಕರಿಗೆ ಆದ್ಯತೆ ನೀಡುವ ಮೂಲಕ ಯುವ ಸಮೂಹಕ್ಕೆ ರಾಜಕೀಯ ಪ್ರೇರಣೆ ನೀಡಲಾಗುತ್ತದೆ ಎಂದು ಹೇಳಿದರು.
ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು, ಕಾರ್ಯಕರ್ತರು ಪಕ್ಷ ನಿಷ್ಠರಾಗಿರಬೇಕೆಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ಹಾಗೂ ಹಿರಿಯ ವಕೀಲರಾದ ಚಂದ್ರಮೌಳಿ, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಆರ್.ಪುಷ್ಪಲತಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಕೆ.ಎ.ಯಾಕುಬ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್‌ಮಾಚಯ್ಯ ಮತ್ತಿತರ ಪ್ರಮುಖರು ಹಾಜರಿದ್ದರು.







