ಮನೆಗಳು ಧೂಮಪಾನ ಮುಕ್ತವಾಗಲಿ: ಡಾ.ಎಂ.ಆರ್.ರವಿ
‘ಧೂಮಪಾನ ಮುಕ್ತ ಮನೆ’ ಜಾಗೃತಿ ಅಭಿಯಾನಕ್ಕೆ ಚಾಲನೆ

ಮಂಗಳೂರು, ಜು.18: ಯುವ ಜನಾಂಗ ಧೂಮಪಾನಕ್ಕೆ ಇದಕ್ಕೆ ಮರುಳಾಗುತ್ತಿರುವ ಹಿನ್ನಲೆಯಲ್ಲಿ ಇದರಿಂದ ಹೊರಬರುವಂತೆ ಮಾಡಲು ಧೂಮಪಾನ ಮುಕ್ತ ಮನೆ ಪರಿಕಲ್ಪನೆ ಆರಂಭಿಸಲಾಗಿದೆ. ಪ್ರತಿ ಮನೆಗಳೂ ಧೂಮಪಾನ ಮುಕ್ತವಾಗುವ ನಿಟ್ಟಿನಲ್ಲಿ ನಾಗರಿಕರು ಕಾರ್ಯೋನ್ಮುಖರಾಗಬೇಕು. ಜನರೇ ಜಾಗೃತರಾದರೆ ಇಂತಹ ದುಶ್ಚಟಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ಎಂ. ಆರ್. ರವಿ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎ.ಜೆ. ದಂತ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ‘ಧೂಮಪಾನ ಮುಕ್ತ ಮನೆ’ ಜಾಗೃತಿ ಅಭಿಯಾನಕ್ಕೆ ನಗರದ ಎ.ಜೆ. ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಅವರು ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಯು ಸವಾಲಾಗಿ ಪರಿಣಮಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಸೇವನೆಯನ್ನು ನಿಷೇಧಿಸಿದ ಬಳಿಕ ಧೂಮಪಾನ ಸೇವನೆ ಸಾಕಷ್ಟು ಹತೋಟಿಗೆ ಬಂದಿದೆ. ಆದಾಗ್ಯೂ ಜಾಗೃತಿ ಅಗತ್ಯವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿಸ್ತರಿಸುವ ಅಗತ್ಯವಿದೆ. ಜಿ.ಪಂ. ಈ ನಿಟ್ಟಿನಲ್ಲಿ ಎ.ಜೆ. ಆಸ್ಪತ್ರೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಧೂಮಪಾನ ಸೇವನೆಯ ದುಶ್ಚಟಗಳ ಬಗ್ಗೆ ಜನಜಾಗೃತಿ ಮೂಡಿಸಲು ನೆರವಾಗುವ ಮಾಹಿತಿಪತ್ರ ಹಾಗೂ ಬ್ರೋಶರ್‌ಗಳನ್ನು ಡಾ.ಎಂ.ಆರ್.ರವಿ ಬಿಡುಗಡೆಗೊಳಿಸಿದರು.
ಪಿಎಚ್‌ಸಿ ವ್ಯಾಪ್ತಿ: ಕಾರ್ಯಕ್ರಮವು ಪ್ರಥಮ ಹಂತದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ 31 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರಂಭಗೊಳ್ಳುತ್ತಿದೆ.
ಯೋಜನೆಯಲ್ಲಿ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ನಡೆಯಲಿದ್ದು, ಆಶಾ ಕಾರ್ಯಕರ್ತೆಯರ ಮೂಲಕ ಎ.ಜೆ. ದಂತ ವಿಜ್ಞಾನ ಸಂಸ್ಥೆಯ ವೈದ್ಯರು, ಆಪ್ತ ಸಮಾಲೋಚಕರು, ವಿದ್ಯಾರ್ಥಿಗಳು ತಾಲೂಕು ವ್ಯಾಪ್ತಿಯ ಮನೆಗಳನ್ನು ಸಂಪರ್ಕಿಸಿ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನವೀನ್‌ಚಂದ್ರ ಹೇಳಿದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್ ಬಿ. ವಿ., ಪ್ರಾಂಶುಪಾಲ ಡಾ. ವೈ. ಭರತ್ ಶೆಟ್ಟಿ, ಉಪ ಪ್ರಾಂಶುಪಾಲ ಡಾ. ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.
ಎ.ಜೆ. ದಂತ ವಿಜ್ಞಾನ ಸಂಸ್ಥೆಯ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗ ಮುಖ್ಯಸ್ಥೆ ಡಾ. ವಿಜಯ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಶ್ರೇಷ್ಠಾ ಅತಿಥಿಗಳನ್ನು ಪರಿಚಯಿಸಿದರು.







